ಇಶಾಂತ್,ಸಿಮರ್ಜೀತ್ ದಾಳಿಗೆ ಹೈದರಾಬಾದ್ ತತ್ತರ
ಹೊಸದಿಲ್ಲಿ, ಡಿ.26: ಇಶಾಂತ್ ಶರ್ಮಾ ನೇತೃತ್ವದ ಬೌಲಿಂಗ್ ದಾಳಿಯ ನೆರವಿನಿಂದ ಹೈದರಾಬಾದ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿರುವ ದಿಲ್ಲಿ ತಂಡ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್ ಅಂತರದ ಗೆಲುವಿನತ್ತ ದಾಪುಗಾಲಿಟ್ಟಿದೆ.
ಮೊದಲ ಇನಿಂಗ್ಸ್‌ನಲ್ಲಿ 284 ರನ್ ಗಳಿಸಿದ್ದ ದಿಲ್ಲಿ ತಂಡ ಕೇವಲ 29 ಓವರ್‌ಗಳಲ್ಲಿ ಹೈದರಾಬಾದ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 69 ರನ್‌ಗಳಿಗೆ ಆಲೌಟ್ ಮಾಡಿತು. ಇಶಾಂತ್(4-19)ಹಾಗೂ ಸಿಮರ್ಜೀತ್ ಸಿಂಗ್(4-23)ತಲಾ 4 ವಿಕೆಟ್‌ಗಳನ್ನು ಹಂಚಿಕೊಂಡರು. ಎಡಗೈ ವೇಗಿ ಪವನ್ ಸುಯಾಲ್(2-25)ಎರಡು ವಿಕೆಟ್ ಪಡೆದರು.
ಫಾಲೋ-ಆನ್‌ಗೆ ಸಿಲುಕಿದ ಹೈದರಾಬಾದ್ ತಂಡ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ. ಆಲ್‌ರೌಂಡರ್ ಕುನ್ವರ್ ಬಿಧುರಿ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಹೈದರಾಬಾದ್ ಇನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 185 ರನ್ ಗಳಿಸಬೇಕಾಗಿದೆ. ಇನ್ನೂ 2 ದಿನಗಳ ಆಟ ಬಾಕಿ ಇದ್ದು, ಪಿಚ್ ವೇಗದ ಬೌಲರ್‌ಗೆ ನೆರವಾಗುತ್ತಿದೆ.





