ಕಝಖ್ಸ್ತಾನ್: ಮನೆಗೆ ಅಪ್ಪಳಿಸಿದ ವಿಮಾನ: ಕನಿಷ್ಠ 15 ಸಾವು
66 ಮಂದಿಗೆ ಗಾಯ

Photo: Twitter
ಅಲ್ಮಾತಿ (ಕಝಖ್ಸ್ತಾನ್), ಡಿ. 27: ಸುಮಾರು 100 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಶುಕ್ರವಾರ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಕಝಖ್ಸ್ತಾನದ ಅಲ್ಮಾತಿ ನಗರದ ಸಮೀಪ ಪತನಗೊಂಡಿದೆ. ವಿಮಾನವು ಮನೆಯೊಂದಕ್ಕೆ ಅಪ್ಪಳಿಸಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಮಂದಿ ಗಾಯಗೊಂಡಿದ್ದಾರೆ.
ಬೆಕ್ ಏರ್ ಕಂಪೆನಿಗೆ ಸೇರಿದ ‘ಫಾಕರ್ 100’ ವಿಮಾನವು ಕಝಖ್ಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರ ಅಲ್ಮಾತಿ ನಗರದಿಂದ ರಾಜಧಾನಿ ನೂರ್-ಸುಲ್ತಾನ್ಗೆ ಶುಕ್ರವಾರ ಮುಂಜಾನೆ ಹಾರಿದ ಸ್ವಲ್ಪವೇ ಹೊತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸಿತು.
ಹಾರಾಟ ಆರಂಭದ ವೇಳೆ ವಿಮಾನದ ಎತ್ತರವು ಕುಸಿಯಿತು. ಇದರ ಪರಿಣಾಮವಾಗಿ ಅದು ಕಾಂಕ್ರೀಟ್ ತಡೆಬೇಲಿಯನ್ನು ಭೇದಿಸಿಕೊಂಡು ಹೋಗಿ ಮಹಡಿ ಮನೆಯೊಂದಕ್ಕೆ ಬಡಿಯಿತು ಎಂದು ಕಝಖ್ಸ್ತಾನ್ನ ನಾಗರಿಕ ವಿಮಾನಯಾನ ಮಂಡಳಿ ತಿಳಿಸಿದೆ. ವಿಮಾನ ಪತನಗೊಳ್ಳಲು ಏನು ಕಾರಣ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.
ವಿಮಾನದ ಎತ್ತರ ಕುಸಿಯುವ ಮುನ್ನ ‘ಭೀಕರ ಸದ್ದು’ ಕೇಳಿಸಿತು ಎಂದು ಅಪಘಾತದಲ್ಲಿ ಬದುಕುಳಿದ ಮಹಿಳೆಯೊಬ್ಬರು ಸ್ಥಳೀಯ ಸುದ್ದಿ ವೆಬ್ಸೈಟೊಂದಕ್ಕೆ ಹೇಳಿದ್ದಾರೆ.
‘‘ವಿಮಾನವು ಓರೆಯಾಗಿ ಹಾರುತ್ತಿತ್ತು. ಜನರು ಚೀರುತ್ತಿದ್ದರು, ಬೊಬ್ಬೆ ಹೊಡೆಯುತ್ತಿದ್ದರು, ಅಳುತ್ತಿದ್ದರು... ಎಲ್ಲವೂ ಸಿನೇಮಾದಲ್ಲಿ ನಡೆಯುತ್ತಿರುವಂತಿತ್ತು’’ ಎಂದು ಅವರು ಹೇಳಿದರು.
ಅಪಘಾತದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 66 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿಮಾನದಲ್ಲಿ 93 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಯಿದ್ದರು.
ಅಪಘಾತಕ್ಕೊಳಗಾದ ವಿಮಾನವನ್ನು 1996ರಲ್ಲಿ ನಿರ್ಮಿಸಲಾಗಿತ್ತು ಎಂದು ಸರಕಾರ ತಿಳಿಸಿದೆ. ಅದಕ್ಕೆ ಕೊನೆಯದಾಗಿ 2019 ಮೇ ತಿಂಗಳಲ್ಲಿ ಹಾರಾಟ ಪ್ರಮಾಣಪತ್ರವನ್ನು ನೀಡಲಾಗಿತ್ತು.







