ಖ್ಯಾತ ಹಿಂದಿ ಚಲನಚಿತ್ರ, ಕಿರುತೆರೆ ನಟ ಆತ್ಮಹತ್ಯೆ

ಮುಂಬೈ, ಡಿ.27: ಹಲವು ಚಲನಚಿತ್ರಗಳು ಹಾಗೂ ಕಿರುತೆರೆಗಳಲ್ಲಿ ನಟಿಸಿರುವ ಹಿಂದಿ ನಟ ಕುಶಾಲ್ ಪಂಜಾಬಿ ಗುರುವಾರ ರಾತ್ರಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಂದ್ರಾ ಪಶ್ಚಿಮದ ತನ್ನ ಮನೆಯಲ್ಲಿ ರಾತ್ರಿ 11:10ರ ಸುಮಾರಿಗೆ ನೈಲಾನ್ ಹಗ್ಗದಿಂದ ಕುಶಾಲ್ ಪಂಜಾಬಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇಂಗ್ಲೀಷ್‌ನಲ್ಲಿ ಬರೆದಿರುವ ಸುಸೈಡ್ ನೋಟ್ ಪತ್ತೆಯಾಗಿದ್ದು, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲಾಗಿದೆ. ಒಂದೂವರೆ ಪುಟದ ಸುಸೈಡ್‌ನೋಟನ್ನು ಕುಶಾಲ್ ಪಂಜಾಬಿ ಅವರ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದು, ಆಸ್ತಿಯನ್ನು ತನ್ನ ಮಗ ಹಾಗೂ ತಂದೆ-ತಾಯಿಗೆ ಹಂಚುವಂತೆ ಕುಶಾಲ್ ಪಂಜಾಬಿ ಮನವಿ ಮಾಡಿದ್ದಾರೆ.
ನಟ ಕುಶಾಲ್ ಪಂಜಾಬಿ ಖ್ಯಾತ ಟಿವಿ ಕಾರ್ಯಕ್ರಮಗಳಾದ ಲವ್ ಮ್ಯಾರೇಜ್, ಸಿಐಡಿ, ದೇಖೊ ಮಗರ್ ಪ್ಯಾರ್ ಸೇ, ಕಭೀ ಹಾಂ, ಕಭೀ ನಾ, ಕಸಂ ಸೇ, ಶ್ಶ್, ಫಿರ್ ಕೋಯಿ ಹೈ, ಫಿಯರ್ ಫ್ಯಾಕ್ಟರ್ ಹಾಗೂ 7ನೇ ಆವೃತ್ತಿಯ ಝಲಕ್ ದಿಖ್ಲಾಜಾದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದರು. ಲಕ್ಷ, ಕಾಲ್ ಹಾಗೂ ಧನ್ ಧನ್ ಗೋಲ್ ಚಿತ್ರಗಳಲ್ಲೂ ನಟಿಸಿದ್ದರು.





