ನಕಲಿ ದಾಖಲೆ ನೀಡಿ ವಂಚನೆ: ಆರೋಪಿ ಸೆರೆ

ಬಂಟ್ವಾಳ, ಡಿ. 27: ಫರಂಗಿಪೇಟೆಯ ಸೊಸೈಟಿಯೊಂದರಲ್ಲಿ ನಕಲಿ ದಾಖಲೆಗಳನ್ನು ನೀಡಿ ಲಕ್ಷಾಂತರ ರೂ. ವಾಹನ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಟ್ವಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಂಗಳೂರಿನ ಪಂಪ್ ವೆಲ್ ನಿವಾಸಿ ಬಶೀರ್ ಯಾನೆ ಹಸನ್ ಬಶೀರ್(42) ಬಂಧಿತ ಆರೋಪಿ. ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ
ಫರಂಗಿಪೇಟೆಯ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಿಂದ ಕಾರುವಾನ್ ಅಟೋಮೊಬೈಲ್ಸ್ ಎಂಬ ಕಾರು ಮಾರಾಟ ಸಂಸ್ಥೆಯ ಹೆಸರಲ್ಲಿ 7 ಲಕ್ಷ ರೂ. ವಾಹನ ಸಾಲ ಪಡೆದು ವಂಚನೆಗೆ ಸಂಬಂಧಿಸಿ ನ. 5ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೇ ಕಾರು ಮಾರಾಟ ಸಂಸ್ಥೆಯ ಹೆಸರಿನಲ್ಲಿ ಮಂಗಳೂರು, ಬಂಟ್ವಾಳ, ವಿಟ್ಲ, ಮೂಡಬಿದಿರೆ ವಿವಿಧ ಬ್ಯಾಂಕ್ ಗಳಿಗೆ ಬೇರೆಯವರ ಹೆಸರಿನಲ್ಲಿ ಕೊಟೇಶನ್ ನೀಡಿ, ಸುಮಾರು 2 ಕೋಟಿ ರೂ. ಅಧಿಕ ಹಣ ಪಡೆದಿರುವ ಮಾಹಿತಿ ತಿಳಿದು ಬಂದಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





