ಉದ್ರಿಕ್ತ ಗುಂಪಿನ ದಾಳಿಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಹಾಜಿ ಖಾದಿರ್

Photo: Twitter(ANI)
ಫಿರೋಝಾಬಾದ್: ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 20ರಂದು ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಗಳ ವೇಳೆ ಉದ್ರಿಕ್ತ ಗುಂಪಿನಿಂದ ಸುತ್ತುವರಿಯಲ್ಪಟ್ಟು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಅಜಯ್ ಕುಮಾರ್ ಎಂಬವರನ್ನು ರಕ್ಷಿಸಿದ ಹಾಜಿ ಖಾದಿರ್ ಎಂಬ ವ್ಯಕ್ತಿ ಅವರನ್ನು ತಮ್ಮ ಮನೆಗೆ ಕೊಂಡು ಹೋಗಿ ಆರೈಕೆ ಮಾಡಿ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಅವರನ್ನು ಪೊಲೀಸ್ ಠಾಣೆವರೆಗೆ ಬಿಟ್ಟು ಬಂದು ಹೃದಯವೈಶಾಲ್ಯತೆ ಮೆರೆದಿದ್ದಾರೆ. ದಾಳಿಯ ವೇಳೆ ಅಜಯ್ ಕೈ ಹಾಗೂ ತಲೆಗೆ ಗಾಯವಾಗಿತ್ತು.
"ಹಾಜಿ ಖಾದಿರ್ ಸಾಹಬ್ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ನನ್ನ ಒಂದು ಬೆರಳಿಗೆ ಹಾಗೂ ತಲೆಗೆ ಗಾಯವಾಗಿತ್ತು. ಅವರು ನನಗೆ ನೀರು ನೀಡಿ ಧರಿಸಲು ಬಟ್ಟೆ ನೀಡಿದರಲ್ಲದೆ ನಾನು ಸುರಕ್ಷಿತವಾಗಿರುವುದಾಗಿ ಹೇಳಿದರು. ನಂತರ ನನ್ನನ್ನು ಠಾಣೆಗೆ ಬಿಟ್ಟು ಬಂದರು,''ಎಂದು ಅಜಯ್ ಕುಮಾರ್ ಹೇಳಿದ್ದಾರೆ
"ಅವರು ನನ್ನ ಬಾಳಿನ ದೇವತೆಯಂತೆ ಬಂದರು. ಅವರಿಲ್ಲದೇ ಇದ್ದಿದ್ದರೆ ನಾನು ಸತ್ತೇ ಹೋಗುತ್ತಿದ್ದೆ,'' ಎಂದೂ ಅವರು ತಿಳಿಸಿದರು.
ಪೊಲೀಸರೊಬ್ಬರನ್ನು ಗುಂಪೊಂದು ಸುತ್ತುವರಿದಿದೆ ಎಂದು ಮಸೀದಿಯಲ್ಲಿದ್ದ ವೇಳೆ ತಿಳಿದು ಬಂತು. ಆತನಿಗೆ ಬಹಳ ಗಾಯಗಳುಂಟಾಗಿದ್ದವು. ಆತನನ್ನು ರಕ್ಷಿಸುವ ಭರವಸೆ ನೀಡಿದೆ. ಆಗ ಆತನ ಹೆಸರು ತಿಳಿದಿರಲಿಲ್ಲ. ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡಿದೆ'' ಎಂದು ಖಾದಿರ್ ಹೇಳಿದ್ದಾರೆ.







