ಮಂಗಳೂರು ಪೋಲಿಸ್ ಆಯುಕ್ತರನ್ನು ವಾಜಾಗೊಳಿಸದಿದ್ದರೆ ಜಿಲ್ಲಾದ್ಯಂತ ಹೊರಾಟ: ಕ್ಯಾಂಪಸ್ ಫ್ರಂಟ್
ಮಂಗಳೂರು: ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿ ಮತ್ತು ಪೊಲೀಸ್ ಆಯುಕ್ತರ ವಜಾಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾಗೋಷ್ಠಿ ನಡೆಸಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ರಿಯಾಝ್ 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕಾಗಿದೆ. ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ಮಂಗಳೂರಿನಲ್ಲಿ ಕಳೆದ ವಾರ ಏಕಾ ಏಕಿ ಸೆಕ್ಷನ್ ಜಾರಿ ಮಾಡಿರುವುದು ಪೊಲೀಸರ ಅಧಿಕಾರದ ದುರ್ಬಳಕೆಯಾಗಿದೆ. ಸೆಕ್ಷನ್ ಜಾರಿಯಾಗಿದ್ದ ಕಾರಣ ಜನರು ಗೊಂದಲಕ್ಕೀಡಾಗಿ ಪ್ರತಿಭಟನೆ ಕೈ ಬಿಟ್ಟ ಸಂದೇಶ ಸರಿಯಾಗಿ ತಲುಪಿರಲಿಲ್ಲ. ಈ ಕಾರಣ ಡಿ. 19 ರಂದು ಮಂಗಳೂರಿಗೆ ಪ್ರತಿಭಟನಾಕಾರರು ಅಲ್ಪ ಸಂಖ್ಯೆಯಲ್ಲಿ ಬಂದು ಸೇರಿದ್ದರು. ಆ ಜನರನ್ನು ಮನವರಿಕೆ ಮಾಡಿ ವಾಪಾಸ್ ಕಳುಹಿಸುವ ಕೆಲಸಕ್ಕೆ ಪೊಲೀಸರು ಹೋಗದೇ ಅಮಾಯಕರ ಮೇಲೆ ಎರಗಿ ಅಮಾನವೀಯವಾಗಿ ಲಾಠಿ ಚಾರ್ಜ್ ಮಾಡಿ ಆಶ್ರು ವಾಯು ಪ್ರಯೋಗಿಸಿದರಲ್ಲದೇ ಸಾಲದಕ್ಕೆ ಗುಂಡಿನ ದಾಳಿ ನಡೆಸಿ ಎರಡು ಜೀವಗಳನ್ನು ಕೂಡ ಕೊಂದಿದ್ದಾರೆ.' ಎಂದರು
ಲಾಠಿ ಚಾರ್ಜ್ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದರೂ ಪೊಲೀಸರು ಅವರ ಮೇಲೂ ಅಮಾನವೀಯವಾಗಿ ಕ್ರೌರ್ಯ ಎಸಗಿದ್ದಾರೆ. ಒಟ್ಟಾರೆ ಅಂದು ನಡೆದ ಎಲ್ಲಾ ಘಟನೆಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ಕಾರಣ. ಅಲ್ಲದೇ ಪೊಲೀಸ್ ವರ್ತನೆಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು ಅವರು ಮಸೀದಿ ಆಸ್ಪತ್ರೆಗಳ ಮೇಲೆ ಅಶ್ರುವಾಯು ಪ್ರಯೋಗ, ಆಸ್ಪತ್ರೆಯ ಐಸಿಯು ಗೆ ದಾಳಿ ಮಾಡಿದ್ದಾರೆ. ಆದುದರಿಂದ ಅಂದು ನಡೆದ ಘಟನೆಯ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು ಅಮಾಯಕ ವಿದ್ಯಾರ್ಥಿಗಳ ಮೇಲೆ ಹಾಕಿದ ಪ್ರಕರಣಗಳನ್ನು ಕೈಬಿಡಬೇಕು ಮತ್ತು ಕೂಡಲೇ ಮಂಗಳೂರು ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ಅವರನ್ನು ಸರಕಾರ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಈ ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.
ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಉಪಸ್ಥಿತಿತರಿದ್ದರು.







