ದೇಶದ ಯುವಕರನ್ನು ಕದಲಿಸಲು ಸಾಧ್ಯವಿಲ್ಲ: ಅಮಿತ್ ಶಾಗೆ ಪ್ರಿಯಾಂಕಾ ತಿರುಗೇಟು

ಹೊಸದಿಲ್ಲಿ, ಡಿ.27: ಈ ವರ್ಷಾರಂಭದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್ಸಿ)ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ಘಟನಾವಳಿ ಅರ್ಥಮಾಡಿಕೊಳ್ಳಿ’ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. ‘‘ದೇಶದ ಯುವಕರು ಇದಕ್ಕೆಲ್ಲಾ ಕದಲುವುದಿಲ್ಲ’’ಎಂದು ನೂತನ ಪೌರತ್ವ ಕಾಯ್ದೆಯ ಬಗ್ಗೆ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿರುವ ವೇಳೆ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪೌರತ್ವ ಕಾಯ್ದೆ ಅಂಗೀಕಾರವಾಗುವ ಮೊದಲೇ ಈ ವರ್ಷಾರಂಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ‘‘ನೀವೆಲ್ಲರೂ ಘಟನಾವಳಿಯನ್ನು ಅರ್ಥ ಮಾಡಿಕೊಳ್ಳಿ. ಮೊದಲಿಗೆ ಕ್ಯಾಬ್(ಪೌರತ್ವ ಕಾಯ್ದೆ)ಬರುತ್ತದೆ... ಆ ಬಳಿಕ ಎನ್‌ಆರ್ ಸಿ ಬರುತ್ತದೆ...ಇದು ಕೇವಲ ಬಂಗಾಳಕ್ಕೆ ಮಾತ್ರವಲ್ಲ...ಇಡೀ ದೇಶದಲ್ಲಿ ಜಾರಿಗೆ ಬರಲಿದೆ. ನಿರಾಶ್ರಿತರು ಚಿಂತಿಸುವ ಅಗತ್ಯವಿಲ್ಲ’’ ಎಂದು ಆಶ್ವಾಸನೆ ನೀಡಿದ್ದರು.
ಅಮಿತ್ ಶಾ ನೀಡಿದ್ದ ಹಿಂದಿನ ಹೇಳಿಕೆಗೆ ತೀಕ್ಷ್ಣವಾಗಿ ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ,‘ಘಟನಾವಳಿ ಅರ್ಥಮಾಡಿಕೊಳ್ಳಿ’ಎಂಬ ಪದಗುಚ್ಛವನ್ನು ಬಳಸಿಕೊಂಡು ಆಡಳಿತಾರೂಢ ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದರು.
‘‘ಘಟನಾವಳಿ ಅರ್ಥ ಮಾಡಿಕೊಳ್ಳಿ...ಮೊದಲಿಗೆ ಅವರು ಎರಡು ಕೋಟಿ ಉದ್ಯೋಗದ ಭರವಸೆ ನೀಡುತ್ತಾರೆ. ಆ ನಂತರ ಸರಕಾರ ರಚಿಸುತ್ತಾರೆ. ಬಳಿಕ ಅವರು ನಿಮ್ಮ ವಿಶ್ವವಿದ್ಯಾಲಯವನ್ನು ಹಾಳು ಮಾಡುತ್ತಾರೆ. ಆ ನಂತರ ಅವರು ಸಂವಿಧಾನವನ್ನು ನಾಶ ಮಾಡುತ್ತಾರೆ. ಆಗ ನೀವು ಪ್ರತಿಭಟಿಸುವಿರಿ. ನಂತರ ಅವರು ನಿಮ್ಮನ್ನು "ಮೂರ್ಖರು'' ಎಂದು ಕರೆಯುತ್ತಾರೆ. ಆದರೆ, ಯಂಗಿಸ್ತಾನ ಇದಕ್ಕೆ ಬಗ್ಗುವುದಿಲ್ಲ’’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.