ಕ್ರಿಸ್ಮಸ್ ಕ್ಯಾರೊಲ್‍ಗಳನ್ನು ಮುಸ್ಲಿಮರಂತೆ ಟೋಪಿ, ಶಿರವಸ್ತ್ರ ಧರಿಸಿ ಹಾಡಿದ ಕ್ರೈಸ್ತ ಯುವಕ ಯುವತಿಯರು

ಪಟ್ಟಣಂತಿಟ್ಟ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿರುವಂತೆಯೇ ಪ್ರತಿಭಟನೆಗೆ ಹಾಗೂ ಮುಸ್ಲಿಮರಿಗೆ ಬೆಂಬಲ ಸೂಚಿಸಿ ಕೇರಳದ ಪಟ್ಟಣಂತಿಟ್ಟದ ಕೊಝೆನ್ಚೆರ್ರಿ ಎಂಬಲ್ಲಿನ ಸೈಂಟ್ ಥಾಮಸ್ ಮಾರ್ಥೋಮ ಚರ್ಚಿನಲ್ಲಿ ಕ್ರಿಸ್ಮಸ್ ಆಚರಣೆಯ ಸಂದರ್ಭ ಕ್ರಿಸ್ಮಸ್ ಕ್ಯಾರೊಲ್ ಹಾಡುವಾಗ 14 ಮಂದಿ ಯುವಕ ಯುವತಿಯರು ಮುಸ್ಲಿಮರಂತೆ ಉಡುಗೆ ಧರಿಸಿದ್ದರು. ಹುಡುಗರು ಟೋಪಿ ಧರಿಸಿದ್ದರೆ ಹುಡುಗಿಯರು ಶಿರವಸ್ತ್ರ ಧರಿಸಿ ಹಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಕ್ರಿಸ್ಮಸ್ ಕ್ಯಾರೊಲ್ ಗಳನ್ನು ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಹಾಡುಗಳಾದ 'ಮಾಪ್ಪಿಳ ಪಾಟ್' ಧಾಟಿಯಲ್ಲಿ ಹಾಡುತ್ತಿರುವುದು ಕೇಳಿಸುತ್ತದೆ. ಹುಡುಗಿಯರು ಹಾಡಿನ ತಾಳಕ್ಕೆ ತಕ್ಕಂತೆ ಮುಸ್ಲಿಂ ಸಮುದಾಯದ ಇನ್ನೊಂದು ಸಾಂಪ್ರದಾಯಿಕ ಕಲಾ ಪ್ರಕಾರ 'ಒಪ್ಪನ'ದಂತೆ ಚಪ್ಪಾಳೆ ತಟ್ಟುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. 'ಕ್ರಿಸ್ಮಸ್ : ಸೆಲೆಬ್ರೇಶನ್ ಆಫ್ ರಿಫ್ಯೂಜೀಸ್' ಎಂಬ ಶೀರ್ಷಿಕೆಯನ್ನು ಈ ವೈರಲ್ ವೀಡಿಯೋಗೆ ನೀಡಲಾಗಿದೆ.
"ಪೌರತ್ವ ಕಾಯಿದೆ ಪ್ರತಿಭಟನಾಕಾರರನ್ನು ಅವರು ಧರಿಸಿದ ಬಟ್ಟೆಗಳಿಂದ ಗುರುತಿಸಬಹುದು, ಎಂದು ಪ್ರಧಾನಿ ತಮ್ಮ ಭಾಷಣವೊಂದರಲ್ಲಿ ಹೇಳಿರುವುದಕ್ಕೆ ಸಾಂಕೇತಿಕ ಪ್ರತಿಭಟನೆಯಾಗಿಯೂ ಈ ಯುವಕ ಯುವತಿಯರು ಮುಸ್ಲಿಮರ ಧಿರಿಸು ಧರಿಸಿದ್ದಾರೆ,'' ಎಂದು ಚರ್ಚಿನ ಸಹಾಯಕ ವಿಕಾರ್ ಫಾ. ಡೇನಿಯಲ್ ಟಿ ಫಿಲಿಪ್ ಹೇಳಿದ್ದಾರೆ.
"ಜನರಿಗೆ ಪೌರತ್ವ ನಿರಾಕರಿಸುವ ಯತ್ನ, ಅವರ ಅಸ್ಮಿತೆ ಕಳೆದುಕೊಳ್ಳುವ ಸಾಧ್ಯತೆಯ ಭಯವಿದೆ. ಸಂತ್ರಸ್ತ ಜನರಿಗೆ ಬೆಂಬಲವಾಗಿ ನಾವು ಈ ಕ್ರಿಸ್ಮಸ್ ಆಚರಣೆ ಮಾಡಿದ್ದೇವೆ,'' ಎಂದು ಅವರು ಹೇಳಿದ್ದಾರೆ.
This is India, no one can stop the unity of our religions. Please see how these youngsters appeared in their X'mas carol service in solidarity with Indian Muslims and protest against CAA&NRC. This was part of their Christmas carol service in Marthoma Church, Kozhenchery, Kerala. pic.twitter.com/CQjHb4GULn
— Jijoy (@jijoy_matt) December 25, 2019







