ಎನ್‌ಪಿಆರ್ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ: ರಾಜ್ಯಸಭಾ ಸದಸ್ಯ ಅನಿಲ್ ಜೈನ್
ಬೆಂಗಳೂರು, ಡಿ.27: ಜನಗಣತಿ ಮುಂಚಿನ ಸಾಮಾನ್ಯ ಪ್ರಕ್ರಿಯೆಯಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಬಗ್ಗೆ ತಪ್ಪು ಹಾಗೂ ಸುಳ್ಳು ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್, ದೇಶದ ಪ್ರಗತಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ಜೈನ್ ಹೇಳಿದ್ದಾರೆ.
ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2021ರ ಜನಗಣತಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದರು.
ಎನ್‌ಪಿಆರ್ ಅನ್ನು 2010ರಲ್ಲಿ ಯುಪಿಎ ಸರಕಾರ ಆರಂಭಿಸಿತ್ತು. ಜನ ಕಲ್ಯಾಣ ಯೋಜನೆಗಳನ್ನು ರೂಪಿಸಲು, ಬಜೆಟ್ ಯೋಜನೆಗಳು ರೂಪಿಸಲು ಮಾತ್ರವಲ್ಲದೆ, ವಿಶ್ವಬ್ಯಾಂಕ್, ಐಎಂಎಫ್ ಮುಂತಾದ ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಗೂ ಇದು ಪ್ರಯೋಜನಕಾರಿಯಾಗಲಿದೆ. ಆದರೆ, ಕಾಂಗ್ರೆಸ್ ಇದನ್ನು ಎನ್‌ಆರ್‌ಸಿ ಜೊತೆ ತಳುಕು ಹಾಕಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಅವರು ದೂರಿದರು.
ಎನ್‌ಆರ್‌ಸಿಯನ್ನು ಸುಪ್ರೀಂಕೋರ್ಟ್ ಆದೇಶದ ಮೇಲೆ ಅಸ್ಸಾಂನಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದೆ. ಎನ್‌ಪಿಆರ್‌ಗೆ ಯಾವುದೇ ದಾಖಲೆಗಳು ಅಗತ್ಯವಿಲ್ಲ. ಮೊಬೈಲ್ ಆ್ಯಪ್ ಮತ್ತು ಆನ್‌ಲೈನ್ ಮೂಲಕವೂ ಎನ್‌ಪಿಆರ್ ಮಾಡಬಹುದಾಗಿದೆ ಎಂದು ಅನಿಲ್ ಜೈನ್ ಹೇಳಿದರು.
ಭಾರತ ಧರ್ಮಛತ್ರವಲ್ಲ, ಆಶ್ರಯ ಬೇಡಿ ಬಂದವರಿಗೆ ಮಾತ್ರ ಪೌರತ್ವ ನೀಡಲಾಗುವುದು, ಒಳ ನುಸುಳುಕೋರರಿಗಲ್ಲ. ಕಾಯ್ದೆಗೆ ತಿದ್ದುಪಡಿ ತರಲು 2003ರಲ್ಲಿ ಡಾ.ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರು. 1965 ಹಾಗೂ 1971ರ ಯುದ್ಧದ ವೇಳೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು 2004ರಲ್ಲಿ ಗುಜರಾತ್ ಹಾಗೂ ರಾಜಸ್ಥಾನ ಸರಕಾರಗಳು ಗೆಜೆಟ್ ಅಧಿಸೂಚನೆ ಹೊರಡಿಸಿದ್ದವು ಎಂದು ಅವರು ತಿಳಿಸಿದರು.
ಸಂಸತ್ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಎಲ್ಲ ರಾಜಕೀಯ ಪಕ್ಷಗಳು ಜಾರಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಸಂವಿಧಾನಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ಅನಿಲ್ ಜೈನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದರಾದ ಪಿ.ಸಿ.ಮೋಹನ್, ಎಸ್.ಮುನಿಸ್ವಾಮಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವೈ.ವಿಜಯೇಂದ್ರ, ತಮ್ಮೇಶ್ ಗೌಡ, ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಉಪಸ್ಥಿತರಿದ್ದರು.







