ಸಿಎಎ ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ: ಅಮಿತ್ ಶಾ

ಶಿಮ್ಲಾ,ಡಿ.27: ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಇಲ್ಲಿ ಆರೋಪಿಸಿದ ಗೃಹಸಚಿವ ಅಮಿತ್ ಶಾ ಅವರು,ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯಲ್ಲಿ ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದರು.
ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು,‘ಸಿಎಎ ಅಲ್ಪಸಂಖ್ಯಾತ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂದು ಕಾಂಗ್ರೆಸ್ ಮತ್ತು ಕಂಪನಿ ವದಂತಿಗಳನ್ನು ಹರಡುತ್ತಿದೆ. ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವ ಅವಕಾಶವಿರುವ ಕಾಯ್ದೆಯಲ್ಲಿನ ಒಂದೇ ಒಂದು ನಿಯಮವನ್ನು ತೋರಿಸಿ ಎಂದು ನಾನು ರಾಹುಲ್ ಗಾಂಧಿಯವರಿಗೆ ಸವಾಲು ಹಾಕುತ್ತಿದ್ದೇನೆ’ ಎಂದರು.
ಪಾಕಿಸ್ತಾನದ ನುಸುಳುಕೋರರನ್ನು ಭಾರತೀಯ ಯೋಧರನ್ನು ಕೊಲ್ಲುವ ‘ಆಲಿಯಾ-ಮಾಲಿಯಾ-ಜಮಾಲಿಯಾ’ ಗಳು ಎಂದು ಬಣ್ಣಿಸಿದ ಶಾ,ಸೋನಿಯಾ ಗಾಂಧಿ-ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರಕಾರವು 10 ವರ್ಷ ಅಧಿಕಾರದಲ್ಲಿತ್ತು. ಆಗ ಪಾಕಿಸ್ತಾನದಿಂದ ಆಲಿಯಾ-ಮಾಲಿಯಾ-ಜಮಾಲಿಯಾಗಳು ಪ್ರತಿದಿನ ಭಾರತದೊಳಗೆ ನುಸುಳುತ್ತಿದ್ದರು. ಅವರು ನಮ್ಮ ಯೋಧರ ತಲೆಗಳನ್ನು ಕತ್ತರಿಸಿಕೊಂಡು ಒಯ್ಯುತ್ತಿದ್ದರು ಮತ್ತು ನಮ್ಮ ದೇಶದ ಪ್ರಧಾನಿಗಳು ‘ಉಫ್’ಎಂದು ಶಬ್ದವನ್ನೂ ಮಾಡುತ್ತಿರಲಿಲ್ಲ ಎಂದರು.
ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಿಂದ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಒದಗಿಸಲು ಅವಕಾಶವನ್ನು ಸಿಎಎ ಹೊಂದಿದೆ ಎಂದರು.







