ಡಿ.30ರಂದು ಬಿಜೆಪಿ ಸಂಕಲ್ಪ ಸಮಾವೇಶ
ಉಡುಪಿ, ಡಿ.27: ಉಡುಪಿ ನಗರ ಬಿಜೆಪಿಯ ವತಿಯಿಂದ ಸಂಕಲ್ಪ ಸಮಾ ವೇಶವನ್ನು ಡಿ.30ರಂದು ಸಂಜೆ 5ಗಂಟೆಗೆ ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ಈ ಸಮಾವೇಶದಲ್ಲಿ ಉಡುಪಿ ನಗರ ನೂತನ ಅಧ್ಯಕ್ಷ, ನಗರ ವ್ಯಾಪ್ತಿಯ 132 ಬೂತ್ ಅಧ್ಯಕ್ಷರುಗಳ, ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. 1962ರಿಂದ ಈವರೆಗೆ ಬಿಜೆಪಿಯಿಂದ ಸ್ಪರ್ಧಿಸಿದ ಉಡುಪಿ ಪುರಸಭೆ ಹಾಗೂ ನಗರಸಭೆ ಸದಸ್ಯರನ್ನು ಮತ್ತು ಹಾಲಿ ಬಿಜೆಪಿ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ವಿಧಾನಸಭಾ ಮುಖ್ಯ ಸಚೇತಕ ಸುನೀಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಭಾಗವಹಿಸಲಿರುವರು. 5ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್, ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪೇಂದ್ರ ನಾಯಕ್, ಶ್ರೀಶ ನಾಯಕ್, ಮಂಜುನಾಥ್ ಮಣಿಪಾಲ, ಗಿರೀಶ್ ಅಂಚನ್ ಉಪಸ್ಥಿತರಿದ್ದರು.







