ಪೇಜಾವರ ಶ್ರೀ ಆರೋಗ್ಯ ಸ್ಥಿತಿ ತೀರಾ ಗಂಭೀರ

ಆಸ್ಪತ್ರೆಗೆ ಭೇಟಿ ನೀಡಿದ ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಕಾಗಿನೆಲೆ ಸ್ವಾಮೀಜಿ
ಉಡುಪಿ, ಡಿ.27: ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಡಿ.20ರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಆರೋಗ್ಯ ಸ್ಥಿತಿ ಇಂದು ತೀರಾ ಗಂಭೀರವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಶುಕ್ರವಾರ ಸಂಜೆ ಬಿಡುಗಡೆಗೊಳಿಸಿದ ವೈದ್ಯಕೀಯ ಬುಲೆಟಿನ್ನಲ್ಲಿ ತಿಳಿಸಿದ್ದಾರೆ.
ಪೇಜಾವರಶ್ರೀಗಳ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಅವರ ಪ್ರಜ್ಞಾ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅವರು ಇನ್ನು ಕೂಡಾ ಜೀವರಕ್ಷಕ ಸಾಧನಗಳ ಅಳವಡಿಕೆಯಲ್ಲಿ ಇದ್ದಾರೆ. ಅವರಿಗೆ ಈಗಲೂ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅವರ ದೇಹಸ್ಥಿತಿಯಲ್ಲಿ ನಿನ್ನೆಯಿಂದ ಇಳಿಮುಖ ಕಂಡುಬಂದಿದೆ ಎಂದು ಬುಲೆಟಿನ್ ತಿಳಿಸಿದೆ. ಇದೇ ವೇಳೆ ಬೆಂಗಳೂರಿಗೆ ಮರಳಿದ್ದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರು ಇಂದು ಮತ್ತೆ ಮಣಿಪಾಲಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಆರ್ಎಸ್ಎಸ್ ಸಹಸರ ಕಾರ್ಯವಾಹ ಸುರೇಶ್ ಜೋಷಿ (ಭಯ್ಯಜಿ ಜೋಷಿ) ಇಂದು ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರಶ್ರೀಗಳ ಆರೋಗ್ಯದ ಕುರಿತು ವಿವರಗಳನ್ನು ಪಡೆದರು. ಅದೇ ರೀತಿ ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಕಾಗಿನೆಲೆ ಸ್ವಾಮೀಜಿ ಅವರು ಸಹ ಇಂದು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು.
ಉಳಿದಂತೆ ಕಾನೂನು ಸಚಿವ ಮಾಧುಸ್ವಾಮಿ, ಚಿಕ್ಕಮಗಳೂರಿನ ವಿನಯ್ ಗುರೂಜಿ, ಜೆಡಿಎಸ್ನ ಎಂಲ್ಸಿ ಶರವಣ, ಮೈಸೂರಿನ ಶಾಸಕ ಎಸ್.ಎ. ರಾಮದಾಸ್, ಕೆ.ರಘುಪತಿ ಭಟ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ವಿದ್ವಾನ್ ಅರಳುಮಲ್ಲಿಗೆ ಪಾರ್ಥಸಾರಥಿ, ಮಾಹೆ ಗುಂಪಿನ ಮುಖ್ಯಸ್ಥ ಡಾ.ರಂಜನ್ ಪೈ ಸಹ ಇಂದು ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ಉಡುಪಿಯ ಪೇಜಾವರ ಮಠದಲ್ಲಿ ಗುರುಗಳ ಉತ್ತಮ ಆರೋಗ್ಯಕ್ಕೆ ವಿಶೇಷ ಜಪ ಪ್ರಾರ್ಥನೆ ಹಾಗೂ ಹತ್ತು ಸಾವಿರ ಕೃಷ್ಣ ಮಂತ್ರ ಹೋಮ ಮತ್ತು ವಿಷ್ಣು ಸಸ್ರನಾಮ ಇತ್ಯಾದಿಗಳು ನಡೆದವು









