ಸಿಎಎ, ಎನ್‌ಆರ್‌ಸಿ ಮುಸ್ಲಿಂ ಮಾತ್ರವಲ್ಲ, ಶೇ.40 ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

ಮುಂಬೈ, ಡಿ. 27: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮೂಲಕ ಆರೆಸ್ಸೆಸ್ ಹಾಗೂ ಬಿಜೆಪಿ ಸರಕಾರ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿರುವ ದಲಿತ ನಾಯಕ ಹಾಗೂ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್, ಸಿಎಎ ಹಾಗೂ ಎನ್‌ಆರ್‌ಸಿ ಮುಸ್ಲಿಮರಿಗೆ ಮಾತ್ರವಲ್ಲ, ಬದಲಾಗಿ ದೇಶದ ಶೇ. 40 ಹಿಂದೂಗಳಿಗೂ ವಿರುದ್ಧವಾಗಿದೆ ಎಂದಿದ್ದಾರೆ. ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಉತ್ತರ ಕೇಂದ್ರ ಮುಂಬೈಯ ದಾದರ್‌ನಲ್ಲಿ ಶುಕ್ರವಾರ ನಡೆದ ದಲಿತ ಹಾಗೂ ಆದಿವಾಸಿಗಳ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ದೇಶಾದ್ಯಂತ ಎನ್‌ಆರ್‌ಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಅಮಿತ್ ಶಾ ಅವರ ಗೃಹ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬದಲಾಯಿಸುತ್ತಾರೊ ಅಥವಾ ಅವರಿಂದ ರಾಜೀನಾಮೆ ಕೋರುತ್ತಾರೊ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದರು.
ದೇಶದ ಪ್ರಸ್ತುತ ಅಶಾಂತಿಯ ಬಗ್ಗೆ ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅಂಬೇಡ್ಕರ್, ‘‘ಸಿಎಎ, ಎನ್‌ಆರ್‌ಸಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಮೂಲಕ ದೇಶದಲ್ಲಿ ಕೆಲವರು ಅಶಾಂತಿಯನ್ನು ಸೃಷ್ಟಿಸಲು ಪಿತೂರಿ ನಡೆಸುತ್ತಿದ್ದಾರೆ. ಇದು ಆರೆಸ್ಸೆಸ್ ಹಾಗೂ ಬಿಜೆಪಿ ನೇತತ್ವದ ಸರಕಾರವಲ್ಲದೆ ಬೇರೆ ಯಾವುದೂ ಅಲ್ಲ’’ ಎಂದರು. ಸಂಸತ್ತು ಅಥವಾ ತನ್ನ ಸಂಪುಟ ಸಭೆಯಲ್ಲಿ ಎನ್‌ಆರ್‌ಸಿ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದಾದರೆ, ಕೇಂದ್ರ ಸರಕಾರ ದೇಶಾದ್ಯಂತ ಎನ್‌ಆರ್‌ಸಿ ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದು ಹೇಗೆ ? ಪ್ರಧಾನಿ ಅವರ ಅನುಮತಿ ಅಲ್ಲದೆ ಅವರು ಹೇಳಿಕೆ ನೀಡಿದರೆ ? ಎಂದು ಪ್ರಕಾಶ್ ಅಂಬೇಡ್ಕರ್ ಪ್ರಶ್ನಿಸಿದ್ದಾರೆ.







