ಸಿಎಎ,ಎನ್ಆರ್ಸಿ ಭಾರತದ ಮುಸ್ಲಿಮರ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಲಿವೆ: ಅಮೆರಿಕ ಕಾಂಗ್ರೆಸ್ನ ಚಿಂತನ ಚಿಲುಮೆ

ಫೈಲ್ ಚಿತ್ರ
ವಾಷಿಂಗ್ಟನ್,ಡಿ.27: ನರೇಂದ್ರ ಮೋದಿ ಸರಕಾರದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಯೋಜಿತ ಎನ್ಆರ್ಸಿ ಪ್ರಕ್ರಿಯೆ ಸುಮಾರು 200 ಮಿಲಿಯದಷ್ಟಿರುವ ಭಾರತದ ಅತಿ ದೊಡ್ಡ ಮುಸ್ಲಿಂ ಅಲ್ಪಸಂಖ್ಯಾತ ವರ್ಗದ ಸ್ಥಿತಿಗತಿಯ ಮೇಲೆ ಪರಿಣಾಮವನ್ನು ಬೀರಬಹುದು ಎಂದು ಅಮೆರಿಕದ ಕಾಂಗ್ರೆಸ್ನ ಚಿಂತನ ಚಿಲುಮೆ ‘ಕಾಂಗ್ರೆಸ್ನಲ್ ರೀಸರ್ಚ್ ಸರ್ವಿಸ್ (ಸಿಎಸ್ಆರ್) ’ ಹೇಳಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ‘ತಟಸ್ಥೀಕರಣ ಪ್ರಕ್ರಿಯೆ’ಯಲ್ಲಿ ಧಾರ್ಮಿಕ ಮಾನದಂಡವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಕಳೆದ ವಾರ ಬಿಡುಗಡೆಗೊಂಡಿರುವ ಸಿಎಸ್ಆರ್ ವರದಿ ತಿಳಿಸಿದೆ.
ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಮುಸ್ಲಿಮರನ್ನು ಹೊರತುಪಡಿಸಿ ಆರು ಧರ್ಮಗಳ ವಲಸಿಗರಿಗೆ ಪೌರತ್ವವನ್ನು ನೀಡುವುದು ಭಾರತೀಯ ಸಂವಿಧಾನದ ವಿಧಿ 14 ಮತ್ತು 15ನ್ನು ಉಲ್ಲಂಘಿಸಬಹುದು ಎಂದು ಸಿಎಸ್ಆರ್ ತನ್ನ ಎರಡು ಪುಟಗಳ ವರದಿಯಲ್ಲಿ ಹೇಳಿದೆ.
ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿಯ ಮುಸ್ಲಿಮರು ಕಿರುಕುಳಗಳನ್ನು ಎದುರಿಸುತ್ತಿಲ್ಲ ಮತ್ತು ಸಿಎಎ ಭಾರತೀಯ ಪ್ರಜೆಗಳಿಗಿಂತ ವಲಸಿಗರನ್ನು ಉದ್ದೇಶಿಸಿರುವುದರಿಂದ ಅದು ಸಾಂವಿಧಾನಿಕವಾಗಿದೆ ಎಂದು ಕಾಯ್ದೆಯ ಪ್ರತಿಪಾದಕರು ಹೇಳುತ್ತಿದ್ದಾರೆ. ತಮ್ಮ ದೇಶಗಳಲ್ಲಿ ಕಿರುಕುಳಗಳನ್ನು ಎದುರಿಸುತ್ತಿರುವ ಶ್ರೀಲಂಕಾದ ತಮಿಳು ಹಿಂದುಗಳು ಮತ್ತು ಮ್ಯಾನ್ಮಾರ್ನ ರೋಹಿಂಗ್ಯಾ ಮುಸ್ಲಿಮರಂತಹ ಇತರ ನೆರೆರಾಷ್ಟ್ರಗಳ ವಲಸಿಗರನ್ನು ಪೌರತ್ವ ಅವಕಾಶದಿಂದ ಹೊರಗಿಟ್ಟಿರುವುದೇಕೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಪಾಕಿಸ್ತಾನದ ಅಹ್ಮದಿಯಾಗಳು ಮತ್ತು ಶಿಯಾಗಳಂತಹ ದಮನಿತ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಎಎ ಅಡಿ ರಕ್ಷಣೆಯನ್ನು ನೀಡಲಾಗಿಲ್ಲ ಎಂದಿರುವ ವರದಿಯು,ಸಿಎಎ ವಿರುದ್ಧ ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಗಳು ಮತ್ತು ಭಾರತದಲ್ಲಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿದೆ.







