ದಿಲ್ಲಿಯ ಜಾಮಾ ಮಸೀದಿ ಬಳಿ ಸಿಎಎ ವಿರುದ್ಧ ಭಾರೀ ಪ್ರತಿಭಟನೆ
ಹೊಸದಿಲ್ಲಿ,ಡಿ.27: ದಿಲ್ಲಿಯ ಜಾಮಾ ಮಸೀದಿಯ ಹೊರಗೆ ಶುಕ್ರವಾರ ನೂರಾರು ಜನರು ಸೇರಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆ ನಡೆಸಿದರು. ದಿಲ್ಲಿ ಪೊಲೀಸರು ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದು,ಉತ್ತರ ಪ್ರದೇಶ ಭವನ,ಸೀಲಂಪುರ ಮತ್ತು ಜಾಫರಾಬಾದ್ ಸೇರಿದಂತೆ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಶುಕ್ರವಾರದ ನಮಾಝ್‌ಗೆ ಮುನ್ನ ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳಿಗೆ ಕೆಲವು ಸಂಘಟನೆಗಳು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿಯ ಕೆಲವೆಡೆಗಳಲ್ಲಿ ಧ್ವಜ ಪಥ ಸಂಚಲನವನ್ನು ನಡೆಸಲಾಗಿದ್ದು,ನಗರದ ವಿವಿಧ ಭಾಗಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಮತ್ತು ಮಾಜಿ ದಿಲ್ಲಿ ಶಾಸಕ ಶುಐಬ್ ಇಕ್ಬಾಲ್ ಅವರೂ ಜಾಮಾ ಮಸೀದಿ ಹೊರಗೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಉತ್ತರ ಪ್ರದೇಶ ಪೊಲೀಸರ ‘ಪೊಲೀಸ್ ರಾಜ್’ನ ವಿರುದ್ಧ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಉತ್ತರ ಪ್ರದೇಶ ಭವನದ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.





