ಮಧ್ಯಪ್ರಾಚ್ಯದಲ್ಲಿ ಯುದ್ಧ ನೌಕೆ, ಗಸ್ತು ವಿಮಾನಗಳ ನಿಯೋಜನೆ: ಜಪಾನ್
ಟೋಕಿಯೊ (ಜಪಾನ್), ಡಿ. 27: ಮಧ್ಯಪ್ರಾಚ್ಯದ ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿರುವ ಹಿನ್ನೆಲೆಯಲ್ಲಿ, ಆ ವಲಯದಲ್ಲಿರುವ ಜಪಾನಿ ಹಡಗುಗಳ ರಕ್ಷಣೆಗಾಗಿ ಅಲ್ಲಿಗೆ ಒಂದು ಯುದ್ಧ ನೌಕೆ ಮತ್ತು ಗಸ್ತು ವಿಮಾನಗಳನ್ನು ಜಪಾನ್ ಕಳುಹಿಸುವುದು ಎಂದು ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೊಶಿಹಿಡೆ ಸುಗ ಹೇಳಿದ್ದಾರೆ. ಜಪಾನ್ ತನ್ನ ಕಚ್ಚಾ ತೈಲ ಆಮದಿನ 90 ಶೇಕಡದಷ್ಟನ್ನು ಈ ವಲಯದಿಂದ ಪಡೆದುಕೊಳ್ಳುತ್ತದೆ.
ಪ್ರಧಾನಿ ಶಿಂರೊ ಅಬೆಯ ಸಚಿವ ಸಂಪುಟ ಅನುಮೋದಿಸಿರುವ ಯೋಜನೆಯ ಪ್ರಕಾರ, ಹೆಲಿಕಾಪ್ಟರ್ ಸಜ್ಜಿತ ಡೆಸ್ಟ್ರಾಯರ್ ನೌಕೆ ಮತ್ತು ಎರಡು ಪಿ-3ಸಿ ಗಸ್ತು ವಿಮಾನಗಳನ್ನು ಕೊಲ್ಲಿ ಸಮುದ್ರದಲ್ಲಿ ನಿಯೋಜಿಸಲಾಗುವುದು. ಇವುಗಳು ಆ ವಲಯದ ಮಾಹಿತಿಗಳನ್ನು ಸಂಗ್ರಹಿಸಿ ಜಪಾನಿ ಹಡಗುಗಳ ಸುರಕ್ಷಿತ ಓಡಾಟಕ್ಕೆ ಅನುವು ಮಾಡಿಕೊಡುತ್ತವೆ.
ತುರ್ತು ಸಂದರ್ಭದಲ್ಲಿ, ಅಪಾಯದಲ್ಲಿರುವ ಜಪಾನ್ ಹಡಗುಗಳನ್ನು ರಕ್ಷಿಸುವುದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಬಳಸಲು ಈ ಪಡೆಗಳಿಗೆ ಜಪಾನ್ ರಕ್ಷಣಾ ಸಚಿವರು ವಿಶೇಷ ಆದೇಶವನ್ನು ನೀಡಲಿದ್ದಾರೆ.
‘‘ಜಪಾನ್ ಸೇರಿದಂತೆ ಅಂತರ್‌ರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸಮೃದ್ಧಿಗಾಗಿ ಮಧ್ಯಪ್ರಾಚ್ಯದ ಶಾಂತಿ ಮತ್ತು ಸ್ಥಿರತೆ ಅತ್ಯಂತ ಮಹತ್ವದ್ದಾಗಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೊಶಿಹಿಡೆ ಸುಗ ಹೇಳಿದರು.
‘‘ಅದೂ ಅಲ್ಲದೆ, ಜಗತ್ತಿನ ಪ್ರಮುಖ ಇಂಧನ ಮೂಲವಾದ ಮಧ್ಯಪ್ರಾಚ್ಯದ ಮೂಲಕ ಜಪಾನ್‌ಗೆ ಸಂಬಂಧಿಸಿದ ಹಡಗುಗಳು ಸುರಕ್ಷಿತವಾಗಿ ಹಾದು ಹೋಗುವಂತೆ ನೋಡಿಕೊಳ್ಳಲು ಈ ಕ್ರಮ ಅಗತ್ಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.







