ವಿಕಲಚೇತನರ ಸಾಮರ್ಥ್ಯ ಗುರುತಿಸುವಂತಹ ಮನಸ್ಥಿತಿ ರೂಪಗೊಳ್ಳಲಿ: ನಟ ಚೇತನ್
ವಿಕಲಚೇತನರ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು, ಡಿ.27: ನಮ್ಮ ಸಮಾಜದಲ್ಲಿ ವಿಕಲಚೇತನರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಮನಸ್ಥಿತಿ ರೂಪಗೊಳ್ಳಬೇಕಿದೆ ಎಂದು ನಟ ಹಾಗೂ ಫೈರ್ ಸಂಸ್ಥೆಯ ಕಾರ್ಯದರ್ಶಿ ಚೇತನ್ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಫೈರ್ ಸಂಸ್ಥೆಯ ವತಿಯಿಂದ ನಗರದ ಡಾ.ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ವಿಕಲಚೇತನ ದಿನಾಚರಣೆಯ ಪ್ರಯುಕ್ತ ಅನಿಕೇತನಾ ಹೆಸರಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರಲ್ಲಿರುವ ಪ್ರತಿಭೆ ದೇಶದ ಅಭಿವೃದ್ಧಿಗೆ ವಿನಿಯೋಗವಾಗಬೇಕು. ಹೀಗಾಗಿ ಅವರ ಪ್ರತಿಭೆಯನ್ನು ಗುರುತಿಸುವುದು ಸಂಘ, ಸಂಸ್ಥೆಗಳ ಆದ್ಯ ಕರ್ತವ್ಯವೆಂದು ತಿಳಿಸಿದರು.
ವಿಕಲಚೇತನರಲ್ಲಿ ಕ್ರೀಡಾಪಟುಗಳಿದ್ದಾರೆ, ಸಂಗೀತಗಾರರಿದ್ದಾರೆ, ಸಾಹಿತಿ, ಬರಹಗಾರರಿದ್ದಾರೆ. ಆದರೆ, ಅವರ ದೈಹಿಕ ನ್ಯೂನ್ಯತೆಯ ಪರಿಣಾಮವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದೆ ಹೋಗಬಹುದು. ಇಂತಹ ಸಂದರ್ಭದಲ್ಲಿ ಅವರ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವಂತಹ ಕಾರ್ಯಕ್ಕಾಗಿಯೇ ಫೈರ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಸಿನೆಮಾ ಕ್ಷೇತ್ರದವರಿಗೆ ಸಾಮಾಜಿಕ ಕಳಕಳಿಯಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಕೆಲವು ನಟ, ನಟಿಯರನ್ನಷ್ಟೆ ಉದಾಹರಣೆಯಾಗಿಸಿಕೊಂಡು ಇಡೀ ಸಿನೆಮಾ ಕ್ಷೇತ್ರವನ್ನು ಅಳಿಯಬಾರದು. ನಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳಿಗೆ ಮಿಡಿಯುವಂತಹ ಹಲವು ಮಂದಿ ಕಲಾವಿದರು ಇದ್ದಾರೆ ಎಂಬುದಕ್ಕೆ ಇಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿನೆಮಾ ಕಲಾವಿದರೇ ಸಾಕ್ಷಿಯೆಂದು ಅವರು ತಿಳಿಸಿದರು.
ಸಿನೆಮಾ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ನೆನ್ನೆ(ಗುರುವಾರ) ನಡೆದ ಸೂರ್ಯ ಗ್ರಹಣದ ವೇಳೆ ವಿಕಲಚೇತನರನ್ನು ತಿಪ್ಪೆಯಲ್ಲಿ ಹೂತ್ತಿಟ್ಟ ಘಟನೆ ನಡೆದಿರುವುದು ಶೋಚನೀಯ. ವೌಢ್ಯತೆಯ ಹೆಸರಿನಲ್ಲಿ ಅವರನ್ನು ಹಿಂಸಿಸುವುದು ಸರಿಯಲ್ಲವೆಂದು ತಿಳಿಸಿದರು.
ಕಲಾವಿದರು ಸಿನೆಮಾ ಕೆಲಸಗಳ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಫೈರ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರ ನೇತೃತ್ವದಲ್ಲಿ ವಿಕಲಚೇತನರ ಪ್ರತಿಭೆಯನ್ನು ಗುರುತಿಸುವುದು, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವಂತಹ ಕಾರ್ಯದಲ್ಲಿ ತೊಡಗಿದೆ. ಈ ಕಾರ್ಯಕ್ಕೆ ಮತ್ತಷ್ಟು ಕಲಾವಿದರು ಕೈ ಜೋಡಿಸಬೇಕೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ಥರಾದವರಿಗೆ, ವಿಕಲಚೇತನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಧನ ಸಹಾಯ ಮಾಡಲಾಯಿತು. ಈ ವೇಳೆ ಫೈರ್ ಸಂಸ್ಥೆಯ ಅರವಿಂದ್, ನರಸಿಂಹರಾಜು, ಜಯಲಕ್ಷ್ಮಿ ಪಾಟೀಲ್, ಪಂಚಮಿ, ನೈನಾ ಪುಟ್ಟಸ್ವಾಮಿ, ಆನಂದ ಪ್ರಿಯ ಸೇರಿದಂತೆ ಮತ್ತಿತರರಿದ್ದರು







