ಪೊಲೀಸರಿಂದ ಬಾಲಕನಿಗೆ ಚಪ್ಪಲಿಯೇಟು: ತನಿಖೆಗೆ ಆದೇಶ

ದಮೋಹ್ (ಮಧ್ಯಪ್ರದೇಶ) : ಮಧ್ಯಪ್ರದೇಶ ಪೊಲೀಸರು ಬಾಲಕನೊಬ್ಬನಿಗೆ ದೊಣ್ಣೆ ಹಾಗೂ ಚಪ್ಪಲಿಯಿಂದ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಕಂಡುಬರುವ ದೃಶ್ಯಾವಳಿಯಂತೆ, ಮಫ್ತಿಯಲ್ಲಿರುವ ಇಬ್ಬರು ಪೊಲೀಸರು ಬಾಲಕನಿಗೆ ಚಪ್ಪಲಿ ಮತ್ತು ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಸಮವಸ್ತ್ರದಲ್ಲಿರುವ ಪೊಲೀಸರು ಇದನ್ನು ನೋಡುತ್ತಿದ್ದಾರೆ. ಬಾಲಕನಿಗೆ ನಿರ್ದಯವಾಗಿ ಥಳಿಸುವ ನಡುವೆಯೇ ಒಂದು ಹಂತದಲ್ಲಿ ಪೊಲೀಸರು ನಗುತ್ತಿರುವುದು ಕೂಡಾ ವೀಡಿಯೊದಲ್ಲಿ ಸೆರೆ ಹಿಡಿಯಲ್ಪಟ್ಟಿದೆ.
ನೋವಿನಿಂದ ಚೀರುತ್ತಿರುವ ಬಾಲಕ ಹೊಡೆಯುವುದು ನಿಲ್ಲಿಸುವಂತೆ ಕೋರುತ್ತಿದ್ದಾನೆ. ಬಳಿಕ ಪೊಲೀಸರ ಕಾಲಿಗೆ ಬಿದ್ದು ಕ್ಷಮಿಸುವಂತೆ ಕೇಳಿಕೊಂಡಿದ್ದಾನೆ.
ಈ ಘಟನೆ ಯಾವಾಗ ನಡೆದಿದೆ ಹಾಗೂ ಬಾಲಕನನ್ನು ಪೊಲೀಸರು ಹೊಡೆಯುತ್ತಿರುವುದೇಕೆ ಎನ್ನುವುದು ಸ್ಪಷ್ಟವಾಗಿಲ್ಲ. ದಮೋಹ್ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ತಿಂಗಳ ಆರಂಭದಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ವೀಡಿಯೊದಲ್ಲಿರುವ ಪೊಲೀಸರನ್ನು ಮಹೇಶ್ ಯಾದವ್ ಹಾಗೂ ಮನೀಶ್ ಗಂಧರ್ವ ಎಂದು ಪತ್ತೆ ಮಾಡಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್ಪಿ ವಿವೇಕ್ ಸಿಂಗ್ ಹೇಳಿದ್ದಾರೆ.
"ಇಂಥ ಅಮಾನವೀಯ ಘಟನೆ ಮಾನವೀಯತೆಗೆ ಕಳಂಕವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.