ಏಳರ ಬಾಲೆಯ ಅತ್ಯಾಚಾರಿಗೆ ಮರಣ ದಂಡನೆ

ಚೆನ್ನೈ : ಏಳು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯೊಬ್ಬನಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.
ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆಯಾದ ಕೇವಲ 20 ದಿನಗಳಲ್ಲಿ ಈ ತೀರ್ಪು ಬಂದಿದೆ.
ಮಾರ್ಚ್ 24ರಂದು ಕೊಯಮತ್ತೂರಿನ ಹೊರವಲಯದ ಪನ್ನಿಮಡೈ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಸಂತೋಷ್ ಕುಮಾರ್ ವಿರುದ್ಧದ ಆರೋಪಕ್ಕೆ ಅಭಿಯೋಜಕರು ಒದಗಿಸಿದ ಪುರಾವೆಯಿಂದ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ದೋಷಿ ಎಂದು ತೀರ್ಮಾನಿಸಲಾಗಿದೆ ಎಂದು ತೀರ್ಪು ನೀಡಿದ ನ್ಯಾಯಾಧೀಶೆ ರಾಧಿಕಾ ಹೇಳಿದ್ದಾರೆ. ಅತ್ಯಾಚಾರ, ಹತ್ಯೆ ಮತ್ತು ಸಾಕ್ಷ್ಯ ನಾಶದ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಲಕಿಯ ಹತ್ಯೆಗಾಗಿ ಮರಣ ದಂಡನೆ ವಿಧಿಸಲಾಗಿದ್ದು, ಅತ್ಯಾಚಾರಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 1000 ರೂ. ದಂಡ, ಸಾಕ್ಷ್ಯ ನಾಶಕ್ಕಾಗಿ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಲಾಗಿದೆ.
ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಕೂಡಾ ಈ ಅಪರಾಧ ಕೃತ್ಯದಲ್ಲಿ ಷಾಮೀಲಾಗಿರುವುದಕ್ಕೆ ಪುರಾವೆ ಲಭಿಸಿದ್ದು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆತನ ಪತ್ತೆಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಮಾರ್ಚ್ 24ರಂದು ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಬಾಲಕಿಯ ತಾಯಿಯ ದೂರಿನ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ, ಮರುದಿನ ಪಕ್ಕದ ಮನೆಯೊಂದರಲ್ಲಿ ಮೊಣಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಸಾಯಿಸಿರುವುದು ಅಟಾಪ್ಸಿ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.







