ದ.ಆಫ್ರಿಕಾ ವಿರುದ್ಧ ಭಾರತದ ಅಂಡರ್-19 ತಂಡಕ್ಕೆ ಭರ್ಜರಿ ಜಯ
ಮೊದಲ ಯೂತ್ ಏಕದಿನ

ಈಸ್ಟ್ ಲಂಡನ್, ಡಿ.27: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತದ ಅಂಡರ್-19 ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಅಂಡರ್-19 ತಂಡ 48.3 ಓವರ್‌ಗಳಲ್ಲಿ 187 ರನ್ ಗಳಿಸಿ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 42.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾದ ನಿರ್ಧಾರ ತಿರುಗುಬಾಣವಾಗಿದ್ದು, ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಲುಕ್ ಬ್ಯೂಫೋರ್ಟ್ 91 ಎಸೆತಗಳಲ್ಲಿ 64 ರನ್ ಗಳಿಸಿ ಸರ್ವಾಧಿಕ ಸ್ಕೋರ್ ಗಳಿಸಿದರು. ಶುಭಾಂಗ್ ಹೆಗ್ಡೆ ಹಾಗೂ ಅಥರ್ವ ಅಂಕೋಲೇಕರ್ ತಲಾ 2 ವಿಕೆಟ್ ಉರುಳಿಸಿದರು. ಗೆಲ್ಲಲು 188 ರನ್ ಗುರಿ ಪಡೆದ ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದಿವ್ಯಾಂಶ್ ಸಕ್ಸೇನ(ಔಟಾಗದೆ 86,116 ಎಸೆತ, 11 ಬೌಂಡರಿ)ಹಾಗೂ ಎನ್.ತಿಲಕ್ ವರ್ಮಾ(59)ಮೊದಲ ವಿಕೆಟ್‌ನಲ್ಲಿ 127 ರನ್ ಜೊತೆಯಾಟದಲ್ಲಿ ನಡೆಸಿ ಉತ್ತಮ ಆರಂಭವನ್ನು ನೀಡಿದರು. ವರ್ಮಾ ಔಟಾದ ಬಳಿಕ ಕುಮಾರ್ ಕುಶಾಗ್ರ(ಔಟಾಗದೆ 43)7.3 ಓವರ್‌ಗಳು ಬಾಕಿ ಇರುವಾಗಲೇ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಭಾರತ ಹಾಗೂ ದ.ಆಫ್ರಿಕಾ ಶನಿವಾರ ಸರಣಿಯ 2ನೇ ಪಂದ್ಯವನ್ನು ಆಡಲಿವೆ.
ಸಂಕ್ಷಿಪ್ತ ಸ್ಕೋರ್
► ಭಾರತ ಅಂಡರ್-19 ತಂಡ: 190/1
(ದಿವ್ಯಾಂಶ್ ಸಕ್ಸೇನ 86, ಎನ್.ತಿಲಕ್ ವರ್ಮಾ 59,ಅಚಿಲ್ ಕ್ಲೊಟೆ 1-42)
► ದ.ಆಫ್ರಿಕಾ ಅಂಡರ್-19 ತಂಡ: 187 ರನ್‌ಗೆ ಆಲೌಟ್
(ಬ್ಯೂಫೋರ್ಟ್ 64, ಜಾಕ್ ಲೀಸ್ 27, ರವಿ ಬಿಶ್ನೋಯ್ 3-36)







