ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಬಂಟ್ವಾಳ, ಡಿ. 28: ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡದ ಶಕ್ತಿಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಆಗಬೇಕು ಎಂದು ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಮ್ಮೇಳನ ಸ್ವಾಗತ ಸಮಿತಿ ಹಾಗೂ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಹಯೋಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಎರಡು ದಿನಗಳ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಎರಡು ದಿನಗಳ ಸಾಹಿತ್ಯ ಸಮ್ಮೇಳನ ನಿಜಾರ್ಥದಲ್ಲಿ ಯಶಸ್ಸು ಕಾಣುವಲ್ಲಿ ಸರ್ವರೂ ಸಹಕರಿಸುವಂತೆ ಅವರು ಮನವಿ ಮಾಡಿದರು. ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ ಕನ್ನಡ ಧ್ವಜಾರೋಹಣಗೈದರು. ತಾಲೂಕು ಕಸಾಪ ಅಧ್ಯಕ್ಷ ಮೋಹನ್ ರಾವ್ ಪರಿಷತ್‍ನ ಧ್ವಜಾರೋಹಣ ನೆರವೇರಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ, ಸಂಚಾಲಕರಾದ ಗಂಗಾಧರ ಆಳ್ವ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರಧಾನ ಕಾರ್ಯದರ್ಶಿ ಸಿ.ಶ್ರೀಧರ್, ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮೀ ವಿ.ಶೆಟ್ಟಿ, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ, ಉಪಾಧ್ಯಕ್ಷ ಅಪ್ಪುರಾಯ ಪೈ ಹಾಗೂ ವಿವಿಧ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು. ಶಿಕ್ಷಕ ದಿನಕರ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ವಿಶಾಲಾಕ್ಷಿ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







