ತನ್ನ ಪರಿಚಯ ಇಲ್ಲ ಎಂದ ಕೇಂದ್ರ ಸಚಿವರಿಗೆ ಪ್ರಶಾಂತ್ ಕಿಶೋರ್ ತಕ್ಕ ಉತ್ತರ

ಹೊಸದಿಲ್ಲಿ, ಡಿ.28: ಪ್ರಶಾಂತ್ ಕಿಶೋರ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ ನೀಡಿದ ಮರುದಿನ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ರಣನೀತಿ ತಜ್ಞ ಕಿಶೋರ್ ವಾಗ್ದಾಳಿ ನಡೆಸಿದರು. ಕೇಂದ್ರ ಸಚಿವರಿಂದ ನಾನು ಇಂತಹ ಹೇಳಿಕೆಯನ್ನು ನಿರೀಕ್ಷಿಸಿದ್ದೆ. ಅವರಿಗೆ ಸಾಮಾನ್ಯ ವ್ಯಕ್ತಿಯ ಗುರುತು ಆಗುವುದಿಲ್ಲ ಎಂದರು.
‘‘ಅವರು ಕೇಂದ್ರದ ಹಿರಿಯ ಸಚಿವರು. ನಮ್ಮಂತಹ ಸಾಮಾನ್ಯ ವ್ಯಕ್ತಿಯ ಪರಿಚಯ ಅವರಿಗೇಕೆ ಇರುತ್ತದೆ?ದಿಲ್ಲಿಯಲ್ಲಿ ನನ್ನಂತೆಯೇ ಉತ್ತರಪ್ರದೇಶ-ಬಿಹಾರದಿಂದ ಬಂದ ಜನರು ನೆಲೆಸಲು ವಸತಿ ಇಲ್ಲದೆ ಪರದಾಡುತ್ತಿದ್ದಾರೆ. ಪುರಿ ಅವರಂತಹ ಹಿರಿಯ ನಾಯಕರಿಗೆ ಇಂತಹ ಜನರ ಬಗ್ಗೆ ಗೊತ್ತಾಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು.
ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವರಾಗಿರುವ ಪುರಿ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ,ನನಗೆ ಕಿಶೋರ್ ವೈಯಕ್ತಿಕವಾಗಿ ಗೊತ್ತಿಲ್ಲ. ಪ್ರಶಾಂತ್ ಕಿಶೋರ್ ಎಂದರೆ ಯಾರು ಎಂದು ಪ್ರಶ್ನಿಸಿದ್ದರು. ಕಿಶೋರ್ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ಭಾಗವಾಗಿದ್ದರು. ‘ಚಾ ಪೆ ಚರ್ಚಾ’ ಎಂಬ ಕಾರ್ಯಕ್ರಮವನ್ನು ಪರಿಚಯಿಸಿದ್ದರು ಎಂದು ವರದಿಗಾರರು ಪುರಿಗೆ ಮಾಹಿತಿ ನೀಡಿದಾಗ, ‘‘ಆ ಸಮಯದಲ್ಲಿ ನಾನು ಇರಲಿಲ್ಲ. ಕಿಶೋರ್ ಎಂದರೆ ಯಾರೆಂದು ಗೊತ್ತಿಲ್ಲ’’ಎಂದರು.
ಕಿಶೋರ್ ಅವರ ಐ-ಪ್ಯಾಕ್ ಎಂಬ ಸಂಸ್ಥೆಯು ಇದೀಗ ಅರವಿಂದ್ ಕೇಜ್ರಿವಾಲ್‌ರೊಂದಿಗೆ ಮುಂಬರುವ ದಿಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಲಿದೆ. 2015ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರಕಾರ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ಚುನಾವಣೆಯ ತಂತ್ರಗಾರಿಕೆಯಲ್ಲಿ ಕಿಶೋರ್ ಪಾತ್ರವಿತ್ತು.