ಸಂಝೋತಾ ಸ್ಫೋಟ ಪ್ರಕರಣ: ಎನ್‍ಐಎ ತನಿಖೆಯ ಬಗ್ಗೆ ಹಲವು ಪ್ರಶ್ನೆಗಳನ್ನೆತ್ತಿದ ಪಿಯುಡಿಆರ್ ವರದಿ

ಹೊಸದಿಲ್ಲಿ: ಹನ್ನೆರಡು ವರ್ಷಗಳ ಹಿಂದೆ 2007ರಲ್ಲಿ ಸಂಭವಿಸಿದ ಸಂಝೋತಾ ಸ್ಫೋಟ ಪ್ರಕರಣ ಕುರಿತಂತೆ ರಾಷ್ಟ್ರೀಯ ತನಿಖಾ ಏಜನ್ಸಿ (ಎನ್ ಐಎ) ಕೈಗೊಂಡ ತನಿಖೆ `ತಾರತಮ್ಯ'ದಿಂದ ಕೂಡಿತ್ತು ಹಾಗೂ ಕೇಸರಿ ಉಗ್ರವಾದದ ಅಂಶವನ್ನು ನಿರ್ಲಕ್ಷ್ಯಿಸಿತ್ತು ಎಂದ ಮಾನವ ಹಕ್ಕುಗಳ ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್ (ಪಿಯುಡಿಆರ್) ತನ್ನ ವರದಿ `ಎ ಕಾಂಪ್ರೊಮೈಸ್ಡ್ ಇನ್ವೆಸ್ಟಿಗೇಶನ್'ನಲ್ಲಿ ಹೇಳಿ ಹಲವಾರು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
"ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಯಿಲ್ಲದೇ ಇರುವುದರಿಂದ ಹಲವಾರು ಮಂದಿ ತಿರುಗಿ ಬಿದ್ದಿರುವುದು, ಅಪರಾಧಕ್ಕೂ ಆರೋಪಿಗಳಿಗೂ ನಂಟು ಕಲ್ಪಿಸುವ ಪ್ರಮುಖ ಸಾಕ್ಷ್ಯವಿಲ್ಲದೇ ಇರುವುದು, ದೋಷಾರೋಪ ಪಟ್ಟಿ ಸಲ್ಲಿಸಲು ಎನ್ ಐಎ ತೋರಿದ ಭಾರೀ ಅವಸರ ಹಾಗೂ ಘಟನೆ ನಡೆದ ನಂತರದ ಕೆಲ ವರ್ಷಗಳಲ್ಲಿ ಕೇಸರಿ ಉಗ್ರ ಸಂಘಟನೆಗಳ ಕುರಿತಂತೆ ತನಿಖಾ ಏಜನ್ಸಿಗಳು ಕಣ್ಣು ಮುಚ್ಚಿ ಕುಳಿತಿದ್ದರಿಂದ ಸಮಯದ ನಷ್ಟವಾಗಿರುವುದು ತಾರತಮ್ಯಕಾರಿ ತನಿಖೆ ನಡೆದಿರುವುದನ್ನು ಸೂಚಿಸುತ್ತದೆ'' ಎಂದು ವರದಿಯ ಜತೆ ಕಳುಹಿಸಿರುವ ಟಿಪ್ಪಣಿಯಲ್ಲಿ ಪಿಯುಡಿಆರ್ ಹೇಳಿದೆ.
ಪ್ರಕರಣದ ಎಲ್ಲಾ ಆರೋಪಿಗಳನ್ನು ಹರ್ಯಾಣದ ಪಂಚಕುಲಾದ ಎನ್‍ಐಎ ವಿಶೇಷ ನ್ಯಾಯಾಲಯ ಮಾರ್ಚ್ 2019ರಲ್ಲಿ ಖುಲಾಸೆಗೊಳಿಸಿತ್ತು. ಖುಲಾಸೆಗೊಂಡವರಲ್ಲಿ ಸ್ವಾಮಿ ಅಸೀಮಾನಂದ, ರಾಮಚಂದ್ರ ಕಲ್ಸಂಗರ, ಸಂದೀಪ್ ಡಾಂಗೆ, ಲೋಕೇಶ್ ಶರ್ಮ, ಕಮಲ್ ಚೌಹಾಣ್, ರಾಜೇಂದ್ರ ಚೌಧುರಿ ಹಾಗೂ ಅಮಿತ್ ಹಕ್ಲ ಸೇರಿದ್ದರು. ಎಲ್ಲರೂ ವಿವಿಧ ಕೇಸರಿ ಉಗ್ರ ಸಂಘಟನೆಗಳ ಭಾಗವಾಗಿದ್ದರು ಎಂಬ ಆರೋಪವಿತ್ತು.
ಅಸಮಾಧಾನಕರ ರೀತಿಯಲ್ಲಿ ನಡೆಸಲಾದ ತನಿಖೆಯಿಂದ ಎಲ್ಲಾ ಆರೋಪಿಗಳೂ ಖುಲಾಸೆಗೊಳ್ಳುವಂತಾಯಿತೆಂದೂ ವಿಶೇಷ ನ್ಯಾಯಾಲಯ ಎನ್‍ಐಎ ಕುರಿತು ಹೇಳಿದ್ದನ್ನೂ ವರದಿ ಉಲ್ಲೇಖಿಸಿದೆಯಲ್ಲದೆ, ತನಿಖೆಯ ಆರಂಭದಿಂದಲೂ ಎನ್‍ಐಎ ಕಾರ್ಯನಿರ್ವಹಿಸಿದ ರೀತಿ ಹಲವಾರು ಪ್ರಶ್ನೆಗಳಿಗೆ ದಾರಿ ಮಾಡಿ ಕೊಟ್ಟಿದೆ ಎಂದು ಹೇಳಿದೆ.
ಪ್ರಮುಖ ಆರೋಪಿಗಳಾದ ಪ್ರಜ್ಞಾ ಠಾಕುರ್, ಸುನೀಲ್ ಜೋಷಿ, ಸಂದೀಪ್ ಡಾಂಗೆ ಹಾಗೂ ಅಸೀಮಾನಂದ ನಡುವೆ ನಂಟಿತ್ತು ಹಾಗೂ ಅವರು ಫೆಬ್ರವರಿ-ಮಾರ್ಚ್ 2007ರ ನಡುವೆ ಪರಸ್ಪರ ಸಂಪರ್ಕದಲ್ಲಿದ್ದರೆಂಬುದಕ್ಕೆ ಕರೆ ವಿವರ ದಾಖಲೆಗಳಿದ್ದರೂ ಅವುಗಳನ್ನು ಎನ್‍ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲವಾಗಿತ್ತಲ್ಲದೆ, ಆರೋಪಿಗಳ ಮೊಬೈಲ್ ಫೋನ್ ಸಿಮ್ ಕಾರ್ಡ್ ಕುರಿತಾದ ಸಾಕ್ಷ್ಯವನ್ನೂ ಒದಗಿಸಿರಲಿಲ್ಲ ಎಂದು ಪಿಯುಡಿಆರ್ ವರದಿ ತಿಳಿಸಿದೆ.







