ಮಧ್ಯಪ್ರದೇಶ: ಪೌರತ್ವ ಕಳೆದುಕೊಳ್ಳುವ ಭೀತಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಅಲೆಮಾರಿ ಜನಾಂಗದ ಜನರು

ಸಾಂದರ್ಭಿಕ ಚಿತ್ರ
ಭೋಪಾಲ್: ಸರಕಾರವು ಎನ್ ಪಿಆರ್ ಹಾಗೂ ಎನ್ಆರ್ ಸಿ ಜಾರಿಗೊಳಿಸಿದ್ದೇ ಆದಲ್ಲಿ ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯ ಶೇ 7ರಿಂದ ಶೇ 8ರಷ್ಟಿರುವ ಅಲ್ಲಿನ ಅನಧಿಸೂಚಿತ, ಅಲೆಮಾರಿ ಹಾಗೂ ಅರೆ-ಅಲೆಮಾರಿ ಸಮುದಾಯಗಳ ಜನರು ತಮ್ಮ ಪೌರತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು www.newsclick.in ವಿಶೇಷ ವರದಿ ತಿಳಿಸಿದೆ.
ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗಗಳ ಸದಸ್ಯರಿದ್ದು ಅವರ ಬಳಿ ಅಗತ್ಯ ದಾಖಲೆಗಳಿಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇದರ ಹೊರತಾಗಿ ಅವರು ಒಂದೇ ಕಡೆ ನೆಲಸದೇ ಇರುವುದರಿಂದ ಅವರ ಬಳಿ ವಿಳಾಸದ ಕುರಿತಾದ ದಾಖಲೆ, ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಯಾ ಭೂಮಿಯ ಒಡೆತನವೂ ಇಲ್ಲವಾಗಿದೆ. ಹೆಚ್ಚಿನವರು ದಿನಗೂಲಿ ಕಾರ್ಮಿಕರು, ಕುರಿ ಕಾಯುವವರು, ಕೃಷಿ ಕಾರ್ಮಿಕರು ಹಾಗೂ ಕರಕುಶಲ ಕಾರ್ಮಿಕರಾಗಿದ್ದಾರೆ. ಈ ಸಮುದಾಯದ ಜನಸಂಖ್ಯೆ 60 ಲಕ್ಷದಷ್ಟಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಹೇಳುತ್ತಿವೆ.
ಈ ಅಲೆಮಾರಿ ಸಮುದಾಯದ ಕೆಲ ಜನರ ಬಳಿ ಆಧಾರ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿದ್ದರೂ ಎನ್ಪಿಆರ್ ಗಾಗಿ ಅವರ ಜನನ ದಿನಾಂಕ ಹಾಗೂ ಹುಟ್ಟಿದ ಸ್ಥಳದ ಕುರಿತಾದ ಮಾಹಿತಿ ಅಗತ್ಯವಿದೆ. ಆದರೆ ಈ ಸಮುದಾಯದ ಹೆಚ್ಚಿನವರಿಗೆ ಈ ಕುರಿತು ಮಾಹಿತಿಯಿಲ್ಲ ಎಂದು ವರದಿ ತಿಳಿಸಿದೆ.





