ಭೀಕರ ಚಂಡಮಾರುತಕ್ಕೆ ತತ್ತರಿಸಿದ ಫಿಜಿ: ಇಬ್ಬರು ಮೃತ್ಯು, 2000 ಜನರ ಸ್ಥಳಾಂತರ
ಸುವಾ(ಫಿಜಿ), ಡಿ.28: ಫಿಜಿಗೆ ಶನಿವಾರ ಅಪ್ಪಳಿಸಿರುವ ಭೀಕರ ಚಂಡಮಾರುತ ದ್ವೀಪರಾಷ್ಟ್ರದಲ್ಲಿ ಭಾರೀ ಹಾನಿ ಎಸಗಿದ್ದು ಕನಿಷ್ಟ ಇಬ್ಬರು ಬಲಿಯಾಗಿದ್ದಾರೆ. ಸುಮಾರು 2 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೀವ್ರ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿರುವ ಕಾರಣ ಕರಾವಳಿ ಪ್ರದೇಶದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಫಿಜಿ ಸರಕಾರ ಎಚ್ಚರಿಕೆ ನೀಡಿದೆ. ವುನಿದಾವ ನಗರದಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಆತನ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ದಕ್ಷಿಣ ಭಾಗದ ದ್ವೀಪದಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನದಿಯಲ್ಲಿ ಈಜಲು ಮುಂದಾದ 18 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ ಹಾಗೂ ತೀವ್ರ ವೇಗದ ಗಾಳಿಯೊಂದಿಗೆ ಅಪ್ಪಳಿಸಿರುವ ಚಂಡಮಾರುತ ದಿಂದ ಆಗಿರುವ ನಷ್ಟ ಹಾಗೂ ಜೀವಹಾನಿಯ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯ ನಿರ್ದೇಶಕ ವಸಿಟಿ ಸೊಕೊ ಹೇಳಿದ್ದಾರೆ. ಗಂಟೆಗೆ 150 ಕಿ.ಮೀ ವೇಗದ ಗಾಳಿಯೊಂದಿಗೆ ದ್ವೀಪರಾಷ್ಟ್ರವನ್ನು ಅಪ್ಪಳಿಸಿರುವ ಚಂಡಮಾರುತ ಬೆಳಗಳು ಹಾಗೂ ಹಲವು ಮನೆಗಳನ್ನು ನಾಶಗೊಳಿಸಿದ್ದು ಭಾರೀ ಮರಗಳನ್ನು ಬುಡಮೇಲುಗೊಳಿಸಿದೆ. ಮರಗಳು ವಿದ್ಯುತ್ ಕಂಬದ ಮೇಲೆ ಉರುಳಿಬಿದ್ದಿದ್ದು ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯ ಜೊತೆಗೆ ಆಸ್ತಿಪಾಸ್ತಿ ನಷ್ಟವಾಗಿದೆ ಎಂದವರು ಹೇಳಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಅಥವಾ ಮರು ನಿಗದಿಗೊಳಿಸಿದ್ದರಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಫಿಜಿಗೆ ಕ್ರಿಸ್‌ಮಸ್ ಹಬ್ಬ ಹಾಗೂ ವರ್ಷಾಂತ್ಯದ ಸಂಭ್ರಮ ಆಚರಿಸಲು ಬಂದಿರುವ ಸಾವಿರಾರು ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿ ಸಿಲುಕೊಂಡಿರುವುದಾಗಿ ವರದಿಯಾಗಿದೆ. ತೀವ್ರ ಗಾಳಿ ಮತ್ತು ಭಾರೀ ಮಳೆಯಿಂದಾಗಿ ರೆಸಾರ್ಟ್‌ನಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಕಿಟಕಿ ಮತ್ತು ಬಾಗಿಲಿನ ಎಡೆಯಿಂದಲೂ ನೀರು ಒಳನುಗ್ಗುತ್ತಿದ್ದು ಎಲ್ಲೆಡೆ ಆತಂಕದ ಪರಿಸ್ಥಿತಿಯಿದೆ ಎಂದು ಫಿಜಿಗೆ ಪ್ರವಾಸ ಬಂದಿರುವ ನ್ಯೂಝಿಲ್ಯಾಂಡ್‌ನ ಮೆಲಾನಿ ಶೆಪರ್ಡ್ ಹೇಳಿದ್ದಾರೆ. ನಾವು ಸಾಕಷ್ಟು ಮುಂಚಿತವಾಗಿಯೇ ಮುನ್ನೆಚ್ಚರಿಕೆ ನೀಡಿದ್ದರೂ ಜನರು ನಿರ್ಲಕ್ಷ ತೋರಿದ್ದರಿಂದ ಜೀವಹಾನಿ ಸಂಭವಿಸಿದೆ ಎಂದು ಹಂಗಾಮಿ ಪೊಲೀಸ್ ಆಯುಕ್ತ ರೂಸಿಯೆಟ್ ಟುಡ್ರಾವು ಹೇಳಿದ್ದಾರೆ.







