ದಲಿತರನ್ನು 'ಹಿಂದೂ' ಎಂದರೆ ಹಲ್ಲೆ ನಡೆಸಬೇಕು: ಪ್ರೊ. ವಿಲಾಸ್ ಕರಾಟ್
ಬೆಂಗಳೂರು, ಡಿ.27: ದಲಿತ ಸಮುದಾಯವನ್ನು ಯಾರಾದರೂ ಹಿಂದೂ ಎಂದರೆ ಹಲ್ಲೆ ನಡೆಸಬೇಕು ಎಂದು ಭಾರತ್ ಮುಕ್ತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ವಿಲಾಸ್ ಕರಾಟ್ ಹೇಳಿದರು.
ಶನಿವಾರ ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ವಿಷನ್ ಕರ್ನಾಟಕ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಎನ್‌ಆರ್‌ಸಿ ಮತ್ತು ಸಿಎಎ ದುಷ್ಪರಿಣಾಮಗಳು ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವರು ರಾಜಕೀಯ ಉದ್ದೇಶಗಳಿಂದ ಎಸ್ಸಿ-ಎಸ್ಟಿ ಸಮುದಾಯವನ್ನು ಹಿಂದೂಗಳೆಂದು ಹೇಳುತ್ತಾರೆ. ಆದರೆ, ನಾವು ಹಿಂದೂಗಳಲ್ಲ. ನಮ್ಮದೇ ಆದ ಸಂಸ್ಕೃತಿ ಇದೆ. ನಮ್ಮದೇ ಆದ ಕಾಯಕವೂ ಇದೆ. ಇದನ್ನು ಮರೆಮಾಚಿ ಹಿಂದೂ ಎಂದರೆ ಹಲ್ಲೆ ನಡೆಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರುವ ಮೂಲಕ ಜನ ದಂಗೆ ಏಳುವಂತೆ ಮಾಡಿದೆ. ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಎಂದ ಅವರು, ಬಿಜೆಪಿ ದೇಶದಲ್ಲಿ ಜನ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಅಮಿತ್ ಶಾ ಮತ್ತು ನರೇಂದ್ರ ಮೋದಿಗೆ ಒಂದೇ ನಿಲುವು ಇಲ್ಲದೇ ಇಬ್ಬರು ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.





