ಎನ್‌ಪಿಆರ್, ಎನ್‌ಆರ್‌ಸಿ ನಗದು ನಿಷೇಧಕ್ಕಿಂತ ಹಾನಿಕರ: ರಾಹುಲ್ ಗಾಂಧಿ

ಹೊಸದಿಲ್ಲಿ, ಡಿ. 28: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತು ಕೇಂದ್ರ ಸರಕಾರವನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕಸರತ್ತು 2016 ನವೆಂಬರ್‌ನ ನಗದು ನಿಷೇಧಕ್ಕಿಂತ ಹೆಚ್ಚು ಹಾನಿಕರವಾದುದು ಎಂದಿದ್ದಾರೆ.
ಕಾಂಗ್ರೆಸ್‌ನ 135ನೇ ಸ್ಥಾಪನಾ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿನ ಎಐಸಿಸಿಯ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದ ನೇಪಥ್ಯದಲ್ಲಿ ಅವರು ಮಾತನಾಡಿದರು. ಈ ಕಸರತ್ತಿನ ಮೂಲ ಚಿಂತನೆ ಬಡ ಜನರಲ್ಲಿ ನೀವು ಭಾರತೀಯರೇ ? ಅಲ್ಲವೇ ? ಎಂದು ಪ್ರಶ್ನಿಸುವುದು ಎಂದು ಅವರು ಹೇಳಿದರು.
‘‘ಅವರ (ಪ್ರಧಾನ ಮಂತ್ರಿ) 15 ಮಂದಿ ಗೆಳೆಯರು ಯಾವುದೇ ದಾಖಲೆಗಳನ್ನು ತೋರಿಸಬೇಕಾಗಿಲ್ಲ. ಉತ್ಪತ್ತಿಯಾದ ಹಣ ಈ 15 ಮಂದಿಯ ಜೇಬಿಗೆ ಹೋಗುತ್ತದೆ’’ ಎಂದು ಅವರು ಸರಕಾರದ ಒಲವು ಹೊಂದಿರುವ 15 ಮಂದಿ ಬಂಡವಾಳಶಾಹಿಗಳನ್ನು ಉದ್ದೇಶಿಸಿ ಹೇಳಿದರು. ಇದು ಜನರಿಗೆ ನಗದು ನಿಷೇಧಕ್ಕಿಂತ ಹೆಚ್ಚು ಹಾನಿಕರವಾದುದು. ಇದು ನಗದು ನಿಷೇಧಕ್ಕಿಂತ ದುಪ್ಪಟ್ಟು ಹಾನಿ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.





