26/11 ಘಟನೆ ಬಳಿಕ ಪಾಕ್ ಮೇಲೆ ದಾಳಿ ಚಿಂತನೆಯನ್ನು ಸರಕಾರ ತಿರಸ್ಕರಿಸಿತ್ತು: ಮಾಜಿ ಐಎಎಫ್ ವರಿಷ್ಠ

ಹೊಸದಿಲ್ಲಿ, ಡಿ. 28: 26/11ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಪ್ರಸ್ತಾಪವನ್ನು ಆಗಿನ ಸರಕಾರ ತಿರಸ್ಕರಿಸಿತ್ತು ಎಂದು ಭಾರತೀಯ ವಾಯುಪಡೆಯ ಮಾಜಿ ವರಿಷ್ಠ ಬಿ.ಎಸ್. ಧನೋವ ಹೇಳಿದ್ದಾರೆ.
ಟೆಕ್ನೋವಂಝಾದ ವಿಜೆಟಿಐಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳು ಇರುವ ಬಗ್ಗೆ ಭಾರತೀಯ ವಾಯು ಪಡೆಗೆ ತಿಳಿದಿತ್ತು. ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಿದ್ಧವಾಗಿತ್ತು. ಆದರೆ, ಪಾಕಿಸ್ತಾನದ ಮೇಲೆ ದಾಳಿ ನಡೆಸಬೇಕೇ, ಬೇಡವೇ ಎಂಬುದು ರಾಜಕೀಯ ನಿರ್ಧಾರವಾಗಿತ್ತು ಎಂದು ಅವರು ಹೇಳಿದರು.
2001ರಲ್ಲಿ ಸಂಸತ್ ದಾಳಿ ನಡೆದ ಬಳಿಕ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸುವ ಮೂಲಕ ಕ್ರಮ ಕೈಗೊಳ್ಳುವ ಪ್ರಸ್ತಾಪವನ್ನು ಭಾರತೀಯ ವಾಯು ಪಡೆ ಪ್ರಸ್ತಾಪಿಸಿತ್ತು. ಆದರೆ, ಅದನ್ನು ಆಗಿನ ಸರಕಾರ ಒಪ್ಪಿಕೊಳ್ಳಲಿಲ್ಲ ಎಂದು ಧನೋವ ಹೇಳಿದ್ದಾರೆ. ಒಂದು ವೇಳೆ ಶಾಂತಿ ಸ್ಥಾಪನೆಯಾದರೆ, ಪಾಕಿಸ್ತಾನ ಹಲವು ಸವಲತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದುದರಿಂದ ಕಾಶ್ಮೀರ ಕುದಿಯುವಂತೆ ಪಾಕಿಸ್ತಾನ ನೋಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಯುದ್ಧಗಳ ಪ್ರಚಾರದಲ್ಲಿ ತೊಡಗಿದೆ ಹಾಗೂ ದಾಳಿ ಮುಂದುವರಿಸಿದೆ ಎಂದು ಹೇಳಿದ ಧನೋವ, ಭಾರತೀಯ ವಾಯು ಪಡೆಗೆ ಯುದ್ಧ ಮಾಡಿ ಪಾಕಿಸ್ತಾನವನ್ನು ಎದುರಿಸುವ ಸಾಮರ್ಥ್ಯ ಇದೆ ಎಂದರು. ಪರಮಾಣು ಶಸ್ತ್ರಾಸ್ತ್ರ ಹೊಂದಿದ ಎರಡು ದೇಶಗಳು ನೆರೆಯ ದೇಶಗಳಾಗಿರುವುದು ಭಾರತ ಎದುರಿಸುತ್ತಿರುವ ಪ್ರಮುಖ ಸವಾಲು ಎಂದು ಅವರು ಹೇಳಿದರು.
ಬಾಲಕೋಟ್ ವಾಯು ದಾಳಿ ಪಾಕಿಸ್ತಾನಕ್ಕೆ ಆಘಾತ ಉಂಟು ಮಾಡಿತ್ತು ಹಾಗೂ ಪಾಕಿಸ್ತಾನ ವಾಯು ಪಡೆಗೆ ಈ ದಾಳಿ ಬಗ್ಗೆ ಗೊತ್ತಿರಲಿಲ್ಲ ಎಂದು ಧನೋವಾ ತಿಳಿಸಿದ್ದಾರೆ.







