‘ಪಡಿತರ ವ್ಯವಸ್ಥೆಯಡಿ ಜೋಳ’ ಸಮಗ್ರ ಅಧ್ಯಯನ: ಹನುಮನಗೌಡ ಬೆಳಗುರ್ಕಿ
ವಿಜಯಪುರ, ಡಿ.28: ಅಧಿಕ ಪೌಷ್ಟಿಕಾಂಶಗಳುಳ್ಳ ಜೋಳ ಹಾಗೂ ರಾಗಿ ಬೆಳೆಗಳನ್ನು ಪಡಿತರ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗುತ್ತಿದ್ದು ಈ ಕುರಿತು ಸಮಗ್ರ ವರದಿ ರೂಪಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ದಾರೆ.
ನಗರದ ಹಿಟ್ಮಳ್ಳಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಜೋಳ ಬೆಳೆಯನ್ನು ಪಡಿತರ ವ್ಯವಸ್ಥೆ ಅಡಿ ತರುವ ನಿಟ್ಟಿನಲ್ಲಿ ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಟಿಕಾಂಶವುಳ್ಳ ಜೋಳ ಬೆಳೆ ಉತ್ತರ ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತಿದ್ದು, ರಾಗಿ ದಕ್ಷಿಣ ಕರ್ನಾಟಕದಲ್ಲಿ ಮಹತ್ವ ಪಡೆದಿದೆ. ಈಗಾಗಲೆ ರಾಗಿ ಬೆಳೆಗೆ ಸಂಬಂಧಪಟ್ಟಂತೆ ದಕ್ಷಿಣ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಜೋಳ ಬೆಳೆಯ ಮಹತ್ವ, ಮಾರುಕಟ್ಟೆ ವ್ಯವಸ್ಥೆ, ಕನಿಷ್ಠ ಬೆಂಬಲ, ಬೆಲೆ ಇತರೆ ತಾಂತ್ರಿಕ ಸೌಲಭ್ಯ ಸೇರಿದಂತೆ ಅವಶ್ಯಕ ವರದಿ ರೂಪಿಸಿಲು ವಿಜಯಪುರ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರ ಮೂಲಕ ರೈತರು ಮತ್ತು ವಿಜ್ಞಾನಿಗಳಿಂದ ಸಲಹೆ ಸೂಚನೆ ಪಡೆದು ಪಡಿತರ ವ್ಯವಸ್ಥೆಯಲ್ಲಿ ಸೇರ್ಪಡೆಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆಯು ಅತ್ಯಂತ ಮಹತ್ವದ ಬೆಳೆಯಾಗಿದೆ. ಅಧಿಕ ಪೌಷ್ಟಿಕಾಂಶವುಳ್ಳ, ಮಕ್ಕಳ ಆರೋಗ್ಯಕ್ಕೆ ಅನುಕೂಲಕರವಾಗಿರುವ, ಯುರೋಪ್ ಅಲ್ಲಿ ಅಧಿಕ ಬೇಡಿಕೆ ಇರುವ ಮತ್ತು ಜೋಳದಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದರೂ ಕೂಡ ಈ ಬೆಳೆಯ ಕ್ಷೇತ್ರ ವಿಸ್ತರಣೆ ಕಡಿಮೆಯಾಗುತ್ತಿದೆ ಎಂದು ಹನುಮನಗೌಡ ತಿಳಿಸಿದರು.
ಈ ಬೆಳೆಯ ಇಳುವರಿ ಹೆಚ್ಚಿಸಲು ನಿರ್ಧಿಷ್ಟ ಬೆಲೆ ದೊರಕಿಸುವ ನಿಟ್ಟಿನಲ್ಲಿ ಪಡಿತರ ವ್ಯವಸ್ಥೆಯಲ್ಲಿ ತರುವ ಭಾಗವಾಗಿ ಪ್ರಸ್ತುತ ಬೆಳೆಯ ಪರಿಸ್ಥಿತಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನಿತರ ತಾಂತ್ರಿಕ ಅಂಶಗಳ ಅಧ್ಯಯನಕ್ಕಾಗಿ ರಾಗಿ ಮತ್ತು ಜೋಳ ಬೆಳೆಗಳ ಕುರಿತು ರೈತ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇತ್ತೀಚಿಗೆ ಯುವ ಜನಾಂಗವು ಕೃಷಿ ಪದ್ಧತಿಯಿಂದ ದೂರ ಉಳಿಯುತ್ತಿದ್ದು ರೈತರಿಗೆ ಬೇಡಿಕೆ ಆಧಾರಿತ ಬೇಸಾಯದ ಬಗ್ಗೆ ಜ್ಞಾನ ನೀಡಬೇಕಾಗಿದೆ. ನಮ್ಮ ತತ್ರಾಂಶ ಮತ್ತು ದತ್ತಾಂಶಗಳನ್ನು ಬೆಳವಣಿಗೆ ಮಾಡುವ ಮೂಲಕ ಯುವ ಜನಾಂಗಕ್ಕೂ ಕೃಷಿ ಪದ್ಧತಿಯ ಬಗ್ಗೆ ತಿಳಿಹೇಳಬೇಕಾಗಿದೆ ಎಂದು ಹನುಮನಗೌಡ ತಿಳಿಸಿದರು.
ಈಗಾಗಲೆ ಆಹಾರ ಭದ್ರತೆ ಕಾಯ್ದೆಯಡಿ ಅಕ್ಕಿಯನ್ನು ಪಡಿತರ ವ್ಯವಸ್ಥೆಗೆ ತರಲಾಗಿದೆ. ಪಡಿತರ ವ್ಯವಸ್ಥೆಯಡಿ ವರ್ಷಕ್ಕೆ 40 ಲಕ್ಷಟನ್ ಹಾಗೂ ಪಡಿತರ ಹೊರತುಪಡಿಸಿ 40 ಲಕ್ಷ ಟನ್ ಆಹಾರ ಉತ್ಪಾದನೆ ಆಗಬೇಕಾಗಿದೆ. ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯಕತೆಗಳೇನು ಎಂಬುವುದನ್ನು ತಿಳಿದು ಜೋಳ ಮತ್ತು ರಾಗಿ ಕುರಿತು ವಿಶೇಷ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂವಾದದಲ್ಲಿ ಮಾತನಾಡಿದ ಕೃಷಿ ವಿವಿಯ ಜಿ.ಎಂ.ಸಜ್ಜನವರ, ವಿಜಯಪುರ ಹಿಂಗಾರಿ ಜೋಳ ವಿಶ್ವದಲ್ಲೆಲ್ಲೂ ದೊರೆಯುವುದಿಲ್ಲ. ಗೋಧಿ ಹಾಗೂ ಅಕ್ಕಿಗಳಿಗಿಂತ ಹೆಚ್ಚು ಪೌಷ್ಟಿಕಾಂಶ, ಕ್ಯಾನ್ಸರ್, ಡಯಾಬಿಟಿಸ್ ರೋಗ ನಿವಾರಕ ಶಕ್ತಿ ಜೋಳದ ಬೆಳೆಗೆ ಇದ್ದು, ಈ ಬೆಳೆಗಳ ಪ್ರದೇಶ ವಿಸ್ತರಿಸುವ ಜೊತೆಗೆ ಬೆಲೆ ಸಹ ಹೆಚ್ಚಿಸಬೇಕಾಗಿದೆ. ಕೃಷಿ ವಿವಿಯಿಂದ ಉತ್ಪಾದನಾ ತಂತ್ರಜ್ಞಾನ ಮತ್ತು ವಿವಿಧ ತಳಿಗಳಿಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಡೀನ್ ಕಲಘಟಗಿ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಎಲ್.ಪಾಟೀಲ್, ಎಪಿಎಂಪಿ ಸಹಾಯಕ ನಿರ್ದೇಶಕ ಎಂ.ಚಬನೂರ, ಆಹಾರ ಇಲಾಖೆಯ ಉಪನಿರ್ದೇಶಕಿ ಸುರೇಖಾ, ಕೃಷಿ ತರಬೇತಿ ಕೇಂದ್ರದ ವಿಜ್ಞಾನಿ ಅಗಸನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







