ವಿಶೇಷ ಜಿಲ್ಲಾಧಿಕಾರಿ ಅಧಿಕಾರ ಮೊಟಕು: ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು, ಡಿ.28: ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳಾದ ಎಂ.ಕೆ.ಜಗದೀಶ್ ಮತ್ತು ಬಸವರಾಜ್ ಅವರ ಅರೆ ನ್ಯಾಯಿಕ ಅಧಿಕಾರವನ್ನು ಮೊಟಕುಗೊಳಿಸಿ ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಾದೇಶಿಕ ಆಯುಕ್ತರ ಆದೇಶ ರದ್ದು ಕೋರಿ ಎಂ.ಕೆ.ಜಗದೀಶ್ ಮತ್ತು ಬಸವರಾಜ್ ಅವರುಗಳು ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಸರಕಾರ ಮತ್ತು ಪ್ರಾದೇಶಿಕ ಆಯುಕ್ತರಿಗೆ ತುರ್ತು ನೋಟಿಸ್ ನೀಡಿತು.
ಅರ್ಜಿದಾರರ ಪರ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ವಾದಿಸಿ, ಪ್ರಾದೇಶಿಕ ಆಯುಕ್ತರು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 27(1ಎ) ಅಡಿಯಲ್ಲಿನ ಅಧಿಕಾರವನ್ನು ತಪ್ಪಾಗಿ ಚಲಾಯಿಸಿದ್ದಾರೆ. ವಿಶೇಷ ಜಿಲ್ಲಾಧಿಕಾರಿಗಳಿಗೆ ನೀಡಿರುವ ಅಧಿಕಾರ ಹಾಗೂ ಹಂಚಿಕೆ ಮಾಡಿರುವ ಕರ್ತವ್ಯಗಳನ್ನು ವಾಪಸ್ ಪಡೆಯವಂತಿಲ್ಲ ಎಂದು ಸರಕಾರವೇ ಆದೇಶಿಸಿದೆ. ಆದರೂ ಪ್ರಾದೇಶಿಕ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅರ್ಜಿದಾರರ ಅರೆ ನ್ಯಾಯಿಕ ಅಧಿಕಾರ ಮೊಟಕುಗೊಳಿಸಿ ಕಾನೂನು ಬಾಹಿರವಾಗಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಆ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ತಡೆ ನೀಡಿತು.







