ಒಲಿಂಪಿಕ್ಸ್ ಕ್ವಾಲಿಫೆಯರ್‌ಗೆ ಮೇರಿಕೋಮ್ ಅರ್ಹತೆ

ಹೊಸದಿಲ್ಲಿ, ಡಿ.28: ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಎಂಸಿ ಮೇರಿಕೋಮ್ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಶನಿವಾರ ಇಲ್ಲಿ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ನಡೆದ ಮಹಿಳಾ ಬಾಕ್ಸಿಂಗ್ ಟ್ರಯಲ್ಸ್‌ನಲ್ಲಿ ಆರು ಬಾರಿಯ ಚಾಂಪಿಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಮೇರಿಕೋಮ್ ನಿಖಾತ್ ಝರೀನ್ ವಿರುದ್ಧ 9-1 ಅಂತರದಿಂದ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಮೇರಿಕೋಮ್ ಮುಂದಿನ ವರ್ಷದ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮೇರಿಕೋಮ್ ಹಾಗೂ ಝರೀನ್ ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿದ್ದರು. ನಿಖಾತ್ ಹಾಲಿ ರಾಷ್ಟ್ರೀಯ ಚಾಂಪಿಯನ್ ಜ್ಯೋತಿ ಗುಲಿಯಾರನ್ನು ಸೋಲಿಸಿದರೆ, ಮೇರಿ ಭಾರತದ ಇನ್ನೋರ್ವ ಬಾಕ್ಸರ್ ರಿತು ಗ್ರೆವಾಲ್‌ರನ್ನು ಸೋಲಿಸಿದ್ದರು.
ಝರೀನ್ ಕೈ ಕುಲುಕಲು ನಿರಾಕರಿಸಿದ ಮೇರಿಕೋಮ್!
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್‌ರನ್ನು ಸೋಲಿಸಿ 2020ರ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ಮೇರಿಕೋಮ್ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡು ವಿವಾದವನ್ನು ಸೃಷ್ಟಿಸಿದ್ದಾರೆ..
ಪಂದ್ಯ ಮುಗಿದ ಬಳಿಕ ಪದ್ಧತಿಯಂತೆ ಝರೀನ್ ಕೈಕುಲುಕಲು ನಿರಾಕರಿಸಿದ ಮೇರಿಕೋಮ್, ತನ್ನನ್ನು ಆಲಿಂಗಿಸಿಕೊಳ್ಳಲು ಯತ್ನಿಸಿದ ಕಿರಿಯ ಎದುರಾಳಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ.
ತನ್ನ ಸಾಮರ್ಥ್ಯವನ್ನು ಪ್ರಶ್ನಿಸಿದ್ದಕ್ಕೆ ಝರೀನ್ ಮೇಲೆ ನನಗೆ ಕೋಪವಿದೆ ಎಂದು ಸುದ್ದಿಗಾರರಿಗೆ ಮೇರಿಕೋಮ್ ತಿಳಿಸಿದರು.
‘‘ಅನಗತ್ಯ ವಿವಾದಕ್ಕೆ ನನ್ನ ಹೆಸರನ್ನು ಎಳೆದುತಂದಿರುವುದು ನನಗೆ ಇಷ್ಟವಾಗಲಿಲ್ಲ. ಹೌದು ನಾನು ಆಕೆಯನ್ನು ಅಪ್ಪಿಕೊಳ್ಳಲಿಲ್ಲ. ನಾನು ಝರೀನ್ ವಿರುದ್ಧ ಟ್ರಯಲ್ ಆಡುವುದಿಲ್ಲ ಎಂದು ಎಲ್ಲೂ ಹೇಳಿರಲಿಲ್ಲ. ಆದಾಗ್ಯೂ ನನ್ನ ಹೆಸರನ್ನು ಝರೀನ್ ಎಳೆದು ತಂದಿದ್ದೇಕೆ?’’ ಎಂದು ಪ್ರಶ್ನಿಸಿದರು.
ಮಹಿಳಾ ಬಾಕ್ಸಿಂಗ್ ದಂತಕತೆ ಮೇರಿಕೋಮ್ ವಿರುದ್ಧ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಟ್ರಯಲ್ಸ್ ನಡೆಸಬೇಕೆಂದು ಬೇಡಿಕೆ ಇಟ್ಟು ಕೇಂದ್ರ ಸಚಿವ ಕಿರಣ್ ರಿಜಿಜುವಿಗೆ ಝರೀನ್ ಬಹಿರಂಗ ಪತ್ರ ಬರೆದಿರುವುದನ್ನು ಉಲ್ಲೇಖಿಸಿ ಮೇರಿಕೋಮ್ ಆಕ್ರೋಶ ವ್ಯಕ್ತಪಡಿಸಿದರು.
‘‘ನಾನು ಕೂಡ ಮನುಷ್ಯಳು. ನನಗೆ ನೋವಾಗುತ್ತದೆ. ನನ್ನ ಅರ್ಹತೆಯನ್ನು ಪ್ರಶ್ನಿಸಿದರೆ ಸಿಟ್ಟು ಬರುವುದಿಲ್ಲವೇ?ಇದು ಮೊದಲ ಬಾರಿ ಅಲ್ಲ. ನಾನು ಮಾಡಿದಷ್ಟು ಸಾಧನೆಯನ್ನು ಭಾರತದ ಇತರ ಬಾಕ್ಸರ್‌ಗಳು ಯಾರೂ ಮಾಡದೇ ಇದ್ದರೂ ಇಂತಹ ಘಟನೆಗಳು ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಡೆದಿದೆ’’ ಎಂದು ಮೇರಿಕೋಮ್ ಹೇಳಿದರು.







