ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ತೀವ್ರ ಹೋರಾಟ ಅಗತ್ಯ: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಡಿ.28 ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಈ ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದಾಗ ಇಲ್ಲಿನ ನ್ಯಾಯಾಂಗ ವ್ಯವಸ್ಥೆ ಅದರ ವಿರುದ್ಧ ಯಾವುದೇ ತೀರ್ಪು ನೀಡಿ ಇಲ್ಲಿನ ಜನರನ್ನು ರಕ್ಷಿಸಿಲ್ಲ. ಆಗ ನಮ್ಮ ಜನರೇ ಸೆಟೆದು ನಿಂತು ಆ ಕರಾಳ ಕಾನೂನನ್ನು ತೆಗೆದುಹಾಕಿದರು. ಅದೇ ರೀತಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವೂ ನಾವೇ ತೀವ್ರ ಹೋರಾಟ ನಡೆಸಿ ಅವುಗಳನ್ನು ರದ್ದುಪಡಿಸಬೇಕಾದ ಅಗತ್ಯವಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
'ವಿಷನ್ ಕರ್ನಾಟಕ' ಸಂಸ್ಥೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿಂದು ಏರ್ಪಡಿಸಿದ್ದ ಎನ್‌ಆರ್‌ಸಿ ಮತ್ತು ಸಿಎಎ ದುಷ್ಪರಿಣಾಮಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಮ್ಮ ನ್ಯಾಯಾಂಗದಿಂದ ಹೊರ ಬರುವ ಒಂದೊಂದು ತೀರ್ಪನ್ನು ಗಮನಿಸುವಾಗ ಎನ್‌ಆರ್‌ಸಿ ವಿಷಯದಲ್ಲಿ ಯಾವುದೇ ನ್ಯಾಯ ದೊರೆಯುವ ವಿಶ್ವಾಸ ಕಾಣುತ್ತಿಲ್ಲ. ಜನರೇ ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಸಂವಿಧಾನದಲ್ಲಿ ಅಡಕವಾಗಿರುವ ಧರ್ಮ ನಿರಪೇಕ್ಷತೆ ನಮ್ಮ ಸಂವಿಧಾನದ ಅತ್ಯಂತ ಶ್ರೀಮಂತಿಕೆಯ ಅಂಶವಾಗಿದೆ. ಯಾವುದೇ ಧರ್ಮವನ್ನು ಪೋಷಿಸುವ ಅಥವಾ ವಿರೋಧಿಸುವ ಅಥವಾ ಮೇಲೆತ್ತುವ ಅಥವಾ ತುಳಿಯುವುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ವಿರೋಧಿಸುತ್ತದೆ. ಜಾತ್ಯತೀತತೆಯ ವಿರುದ್ಧವಾಗಿ ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ವಿವಿಧ ರೀತಿಯ ಕಿರುಕುಳಗಳು ನಡೆಯುತ್ತಿವೆ. ಆದರೆ ಅವೆಲ್ಲವನ್ನೂ ಕಡೆಗಣಿಸಿ ಕೇವಲ ಧರ್ಮಾಧಾರಿತ ಕಿರುಕುಳಕ್ಕೊಳಗಾದವರಿಗೆ ಪೌರತ್ವ ನೀಡಲು ಮುಂದಾಗಿರುವುದು ಬೂಟಾಟಿಕೆಯಾಗಿದೆ ಎಂದು ಟೀಕಿಸಿದರು.
ಆಡಳಿತ ಮಾಡಲು ಗೊತ್ತಿಲ್ಲದ ಮತ್ತು ಯೋಗ್ಯತೆ ಇಲ್ಲದವರು ಮಾತ್ರ ಈ ರೀತಿ ಇಂತಹ ಕಾನೂನುಗಳನ್ನು ತರಲು ಸಾಧ್ಯ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಜನರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಗಮನವನ್ನು ಬೇರೆಡೆ ತಿರುಗಿಸಲು 370 ವಿಧಿ ರದ್ದು, ತ್ರಿವಳಿ ತಲಾಖ್, ನೋಟು ಅಮಾನ್ಯ, ಸಿಎಎ, ಎನ್‌ಆರ್‌ಸಿ ಮುಂತಾದ ಕಾನೂನುಗಳನ್ನು ತರಲಾಗುತ್ತಿದೆ. ಇವೆಲ್ಲವೂ ಹೆಚ್ಚು ದಿನ ನಡೆಯುವುದಿಲ್ಲ. ಬೂಟಾಟಿಕೆ ಬಯಲಾಗಲಿದೆ ಎಂದು ರವಿವರ್ಮ ಕುಮಾರ್ ಹೇಳಿದರು.
ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸಿ ಮನು ಸಂವಿಧಾನವನ್ನು ಜಾರಿಗೆ ತರಲು ನಿರಂತರ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‌ಆರ್‌ಸಿಯಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಇತರ ಜಾತಿ, ಜನಾಂಗಗಳಿಗೂ ತೊಂದರೆಯಾಗಲಿದೆ. ಆದ್ದರಿಂದ ಈಗಲೇ ಎಲ್ಲರೂ ಎಚ್ಚೆತ್ತುಕೊಂಡು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಮುಸ್ಲಿಮರು ಸೇರಿದಂತೆ ಯಾರಿಗೂ ಇದರಿಂದ ತೊಂದರೆಯಾಗುವುದಿಲ್ಲ ಎಂದು ಅವರು ಬೊಬ್ಬೊರಿಯುತ್ತಿದ್ದಾರೆ. ಆದರೆ ಕಾನೂನನ್ನು ಸರಿಯಾಗಿ ಓದಿದರೆ ಇದರಿಂದ ಎಲ್ಲರಿಗೂ ಸಮಸ್ಯೆಯಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಸಂಸತ್ ಸುಪ್ರೀಂ ಅಲ್ಲ, ಇಲ್ಲಿನ ಜನರೇ ಸುಪ್ರೀಂ. ಆದ್ದರಿಂದ ಜನ ವಿರೋಧಿಯಾಗಿರುವ ಈ ಕಾನೂನನ್ನು ರದ್ದುಪಡಿಸುವವರೂ ನಾವು ಬೀದಿಗಿಳಿದು ಹೋರಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೇವಲ ಶೇಕಡಾ 3ರಷ್ಟಿರುವ ಜನರು ಸಂಸತ್‌ನಲ್ಲಿ 103 ಜನರಿದ್ದಾರೆ. ಅವರ ಜನಸಂಖ್ಯೆಯ ಪ್ರಕಾರ ಕೇವಲ 16ರಷ್ಟು ಮಂದಿ ಮಾತ್ರ ಸಂಸತ್‌ಗೆ ಆರಿಸಿ ಬರಬೇಕಿತ್ತು. ಆದರೆ ಬಿಜೆಪಿಯಿಂದ 87, ಕಾಂಗ್ರೆಸ್‌ನಿಂದ 8 ಮತ್ತು ಇತರ ಪಕ್ಷಗಳಿಂದ 9 ಮಂದಿ ಈ
ಸಮುದಾಯದಿಂದ ಆರಿಸಿ ಬಂದಿದ್ದಾರೆ. ನಾವು ನಮ್ಮ ಮತಗಳನ್ನು 500-1000 ರೂಪಾಯಿಗೆ ಮಾರಾಟ ಮಾಡಿದ್ದರಿಂದಲೇ ಈ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಅಂಬೇಡ್ಕರ್ ಹೇಳಿದಂತೆ ನಾವು ಪಾರ್ಲಿಮೆಂಟ್ ಅನ್ನು ವಶಪಡಿಸಿಕೊಳ್ಳಲು ಮತ ಎಂಬ ಅಸ್ತ್ರವನ್ನು ಬಳಸಬೇಕು ಎಂದು ಕರೆ ನೀಡಿದರು.
ಎಲ್ಲಿಂದಲೋ ಬಂದವರು ನಮ್ಮ ಪೌರತ್ವವನ್ನು ಸಾಬೀತುಪಡಿಸಲು ಕೇಳುತ್ತಿದ್ದಾರೆ. ನಾವು ಇಲ್ಲಿನ ಮೂಲ ನಿವಾಸಿಗಳು. ಬೇಕಾದರೆ ನಮ್ಮ ಡಿಎನ್‌ಎ ಪರೀಕ್ಷೆ ನಡೆಸಿ. ಇಲ್ಲಿನ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳ ಡಿಎನ್‌ಎ ಒಂದೇ ಆಗಿರುತ್ತದೆ. ಮಧ್ಯ ಏಷ್ಯಾದಿಂದ ಬಂದವರ ಡಿಎನ್‌ಎ ಏನು ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ, ಧಾರ್ಮಿಕ ಮುಖಂಡರಾದ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಪಾಲ್ಗೊಂಡಿದ್ದರು.







