ವೇಟ್‌ಲಿಫ್ಟರ್ ಸೀಮಾಗೆ ನಾಲ್ಕು ವರ್ಷ ನಿಷೇಧ
ಡೋಪಿಂಗ್ ನಿಯಮ ಉಲ್ಲಂಘನೆ

ಹೊಸದಿಲ್ಲಿ, ಡಿ.28: ಭಾರತದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ವೇಟ್‌ಲಿಫ್ಟರ್ ಸೀಮಾ ಡೋಪಿಂಗ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.
ಈ ವರ್ಷ ವಿಶಾಖಪಟ್ಟಣದಲ್ಲಿ ನಡೆದಿದ್ದ 34ನೇ ಆವೃತ್ತಿಯ ಮಹಿಳಾ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೀಮಾ ಅವರ ಡೋಪಿಂಗ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ತನ್ನ ಪ್ರದರ್ಶನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಪತ್ತೆಯಾಗಿದೆ. ಇದು ಸಂಪೂರ್ಣ ವಂಚನೆಯ ಪ್ರಕರಣವಾಗಿದ್ದು, ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ನಿಯಮದ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ)ಹೇಳಿಕೆಯೊಂದರಲ್ಲಿ ತಿಳಿಸಿದೆ. ಸೀಮಾ 2017ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. 2018ರಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಆರನೇ ಸ್ಥಾನ ಪಡೆದಿದ್ದರು.





