ಭಾರತ ತಂಡಕ್ಕೆ ದಿಲ್‌ಪ್ರೀತ್
ರಾಷ್ಟ್ರೀಯ ಹಾಕಿ ಕೋಚಿಂಗ್ ಶಿಬಿರ
ಹೊಸದಿಲ್ಲಿ, ಡಿ.28: ಮುಂದಿನ ತಿಂಗಳು ಭುವನೇಶ್ವರದಲ್ಲಿ ಆರಂಭವಾಗಲಿರುವ ಹಾಕಿ ಪ್ರೊ ಲೀಗ್‌ಗೆ ಮುಂಚಿತವಾಗಿ 2 ವಾರಗಳ ಕಾಲ ನಡೆಯಲಿರುವ ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕೆ 32 ಸದಸ್ಯರುಗಳನ್ನು ಒಳಗೊಂಡ ಪುರುಷರ ಹಾಕಿ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಯುವ ಸ್ಟ್ರೈಕರ್ ದಿಲ್‌ಪ್ರೀತ್ ಸಿಂಗ್ ಈ ತಂಡವನ್ನು ಸೇರಿಕೊಂಡಿದ್ದಾರೆ.
ಜ.18 ಹಾಗೂ 19ರಂದು ಹಾಲೆಂಡ್ ವಿರುದ್ಧ ಮೊದಲ ಬಾರಿ ಪ್ರೊ ಲೀಗ್ ಪಂದ್ಯವನ್ನು ಆಡಲಿರುವ 32 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಹಾಕಿ ಇಂಡಿಯಾ ಘೋಷಿಸಿದೆ.
2018ರ ಪುರುಷರ ವಿಶ್ವಕಪ್‌ನಲ್ಲಿ ಭಾರತೀಯ ಹಿರಿಯರ ತಂಡದಲ್ಲಿದ್ದ ದಿಲ್‌ಪ್ರೀತ್ ಈ ವರ್ಷ ಸುಲ್ತಾನ್ ಆಫ್ ಜೊಹೊರ್ ಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಸೀನಿಯರ್ ಕೋರ್ ಗ್ರೂಪ್‌ಗೆ ವಾಪಸಾಗಿದ್ದಾರೆ. ಒಡಿಶಾದ ರಾಜಧಾನಿಯಲ್ಲಿರುವ ಕಳಿಂಗ ಸ್ಟೇಡಿಯಂನಲ್ಲಿ ನಡೆಯುವ ರಾಷ್ಟ್ರೀಯ ಶಿಬಿರದ ಸಂಭಾವ್ಯ ಪಟ್ಟಿಯಲ್ಲಿ ಯುವ ಆಟಗಾರರಾದ ಶೀಲಾನಂದ ಲಾಕ್ರಾ, ರಾಜ್‌ಕುಮಾರ್ ಪಾಲ್, ನೀಲಂ ಸಂಜೀಪ್ ಹಾಗೂ ಡಿಪ್ಸನ್ ಟಿರ್ಕಿ ಅವರಿದ್ದಾರೆ. ಕೋರ್ ಗುಂಪಿನಲ್ಲಿ ಹಿರಿಯ ಹಾಗೂ ಕಿರಿಯ ಆಟಗಾರರ ಮಿಶ್ರಣವಿದೆ.





