ಕರ್ನಾಟಕ - ಹಿಮಾಚಲ ಪಂದ್ಯ ಡ್ರಾ
ರಿಷಿ ಧವನ್ ಪಂದ್ಯ ಶ್ರೇಷ್ಠ

ಮೈಸೂರು, ಡಿ.28: ಆತಿಥೇಯ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.
ನಾಲ್ಕನೇ ಹಾಗೂ ಅಂತಿಮ ದಿನವಾದ ಶನಿವಾರ ಗೆಲ್ಲಲು 183 ರನ್ ಗುರಿ ಪಡೆದಿದ್ದ ಹಿಮಾಚಲಪ್ರದೇಶ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿತು. ಪ್ರಶಾಂತ್ ಚೋಪ್ರಾ(12)ಹಾಗೂ ವಶಿಷ್ಟ(2)ಕ್ರೀಸ್ ಕಾಯ್ದುಕೊಂಡಿದ್ದರು. ವಿ.ಕೌಶಿಕ್(2-13)ಎರಡೂ ವಿಕೆಟ್ ಪಡೆದಿದ್ದರು.
ಮೊದಲ ಇನಿಂಗ್ಸ್‌ನಲ್ಲಿ 114 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಹಿಮಾಚಲಪ್ರದೇಶ ಒಟ್ಟು 3 ಅಂಕ ಗಳಿಸಿದರೆ, ಕರ್ನಾಟಕ ಕೇವಲ ಒಂದಂಕಿಗೆ ತೃಪ್ತಿಪಟ್ಟುಕೊಂಡಿದೆ. ಹಿಮಾಚಲದ ಪರವಾಗಿ ಮೊದಲ ಇನಿಂಗ್ಸ್‌ನಲ್ಲಿ ಸರ್ವಾಧಿಕ ರನ್(93)ಗಳಿಸಿದ್ದಲ್ಲದೆ ಬೌಲಿಂಗ್‌ನಲ್ಲಿ ಐದು ವಿಕೆಟ್ ಗೊಂಚಲು(5-83) ಪಡೆದು ಆಲ್‌ರೌಂಡ್ ಪ್ರದರ್ಶನ ನೀಡಿದ ರಿಷಿ ಧವನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಕರ್ನಾಟಕ 296 ರನ್‌ಗೆ ಆಲೌಟ್:
ಇದಕ್ಕೂ ಮೊದಲು 3 ವಿಕೆಟ್‌ಗಳ ನಷ್ಟಕ್ಕೆ 191 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 108.3 ಓವರ್‌ಗಳಲ್ಲಿ 296 ರನ್‌ಗೆ ಆಲೌಟಾಯಿತು. 69 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಕೇವಲ ಒಂದು ರನ್‌ನಿಂದ ಶತಕವಂಚಿತರಾದರು. ಕರ್ನಾಟಕದ ಪರ ಸರ್ವಾಧಿಕ ರನ್(99, 201 ಎಸೆತ, 8 ಬೌಂಡರಿ)ಗಳಿಸಿದ ಪಡಿಕ್ಕಲ್ ಅರೋರಗೆ ವಿಕೆಟ್ ಒಪ್ಪಿಸಿದರು.
ಪಡಿಕ್ಕಲ್ ನಾಯಕ ಕರುಣ್ ನಾಯರ್(64, 160 ಎಸೆತ, 4 ಬೌಂಡರಿ)ಜೊತೆ 4ನೇ ವಿಕೆಟ್‌ಗೆ 152 ರನ್ ಜೊತೆಯಾಟ ನಡೆಸಿದರು. ನಾಯರ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ಅರೋರ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ನಾಯರ್ ಔಟಾದ ಬೆನ್ನಿಗೇ ಶ್ರೇಯಸ್ ಗೋಪಾಲ್(1)ರಿಷಿ ಧವನ್ ಬೌಲಿಂಗ್‌ಗೆ ಔಟಾದರು. ಸುಚಿತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ವಿಕೆಟ್‌ಕೀಪರ್ ಶರತ್(42, 82 ಎಸೆತ) ಜೊತೆ 8ನೇ ವಿಕೆಟ್ ಜೊತೆಯಾಟದಲ್ಲಿ 46 ರನ್ ಸೇರಿ ಸಿದ ಮಿಥುನ್(22, 54ಎಸೆತ) ತಂಡದ ಮೊತ್ತವನ್ನು 287ಕ್ಕೆ ತಲುಪಿಸಿದರು. ಹಿಮಾಚಲದ ಪರವಾಗಿ ರಿಷಿ ಧವನ್(5-83)ಯಶಸ್ವಿ ಬೌಲರ್ ಎನಿಸಿಕೊಂಡರು. ಅರೋರ(2-68) ಹಾಗೂ ಮಾಯಾಂಕ್ ದಾಗರ್(2-34)ತಲಾ ಎರಡು ವಿಕೆಟ್ ಪಡೆದರು







