ಸಮಾನತೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಿದ ಅನುಭವ: ಸಂಸದ ಶ್ರೀನಿವಾಸ ಪ್ರಸಾದ್
ಬೌದ್ಧ ಧಮ್ಮ ದೀಕ್ಷಾ, ಅಭಿನಂದನಾ ಸಮಾರಂಭ

ಮಂಡ್ಯ, ಡಿ.28: ದೇವಸ್ಥಾನ, ಕೆರೆಕಟ್ಟೆಗಳು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಸಮಾನತೆ, ಸಹೋದರತೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಸಿಕ್ಕ ಅನುಭವವಾಗುತ್ತದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ನಗರದ ಕಲಾಮಂದಿರದಲ್ಲಿ ಚಿಕ್ಕರಸಿನಕೆರೆ ಬ್ಯಾಂಕ್ ಶಿವಲಿಂಗಯ್ಯ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಬೌದ್ಧ ಬಿಕ್ಕುಗಳಿಂದ ಧಮ್ಮ ಧೀಕ್ಷಾ ಕಾರ್ಯಕ್ರಮ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,. ಸಮಾನತೆ ಹೇಳುವುದಲ್ಲ, ಅದನ್ನು ಅನುಭವಿಸುವ ಸ್ವಾತಂತ್ರ್ಯ ಇರಬೇಕು ಎಂದರು.
ಹಲವು ರಾಜಕೀಯ ನಾಯಕರಿರಬಹುದು. ಆದರೆ, ಪಕ್ಷರಹಿತವಾಗಿ ಶೋಷಿತರಿಗೆ, ದಲಿತರಿಗೆ, ಅಸ್ಪೃಶ್ಯರಿಗೆ ಏಕೈಕ ನಾಯಕ ಎಂದಾದರೆ ಅದು ಕೇವಲ ಅಂಬೇಡ್ಕರ್ ಮಾತ್ರ. ಸಂಕುಚಿತ ಭಾವನೆ ಬಿಟ್ಟು ಅವರನ್ನು ಒಪ್ಪಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಜಗತ್ತು ಮೆಚ್ಚಿರುವ ಏಕೈಕ ನಾಯಕ. ಅವರಂತಹ ವ್ಯಕ್ತಿತ್ವ ಜಗತ್ತಿನಲ್ಲಿ ಮತ್ತೆ ಸಿಗುವುದಿಲ್ಲ. ಕಗ್ಗತ್ತಲಲ್ಲಿದ್ದವರಿಗೆ ಬೆಳಕಿನ ದಾರಿ ತೋರಿದರು. ಅವರನ್ನು ಆಧ್ಯಾತ್ಮಿಕ ನಾಯಕರನ್ನಾಗಿಟ್ಟುಕೊಂಡು ಧಾರ್ಮಿಕ ವಿಮೋಚನೆಗೆ ಚಿಂತನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ, ಹಿಂದೂ ಆಗಿ ನಾನು ಸಾಯಲಾರೆ ಎಂದು ಹೇಳಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಬೌದ್ಧ ಧಮ್ಮ ಗ್ರಂಥ ಬರೆದರು. ಈ ನಿಟ್ಟಿನಲ್ಲಿ ಬೌದ್ಧ ಧೀಕ್ಷಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದು ಅವರು ಹೇಳಿದರು.
ಚಿಕ್ಕರಸಿನಕೆರೆ ಶಿವಲಿಂಗಯ್ಯ ದಂಪತಿ ಹಾಗೂ ಅವರ ಮಾತೋಶ್ರೀಯವರನ್ನು ಅಭಿನಂದಿಸಲಾಯಿತು. ಹಲವರು ಬೌದ್ಧ ಧಮ್ಮ ದೀಕ್ಷೆ ಪಡೆದರು.
ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆನಂದ್ ಬಂತೇಜಿ, ಮನೋರಖ್ಖಿತ ಬಂತೇಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಚಿಂತಕ ಡಾ.ಕಾಳೇಗೌಡ ನಾಗವಾರ, ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ವಿಚಾರವಾದಿ ಕೆ.ಮಾಯಿಗೌಡ, ಅಭಿನಂದನಾ ಸಮಿತಿ ಅಧ್ಯಕ್ಷ ಯಮದೂರು ಸಿದ್ದರಾಜು, ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಪ್ರಜಾಪ್ರಭುತ್ವ ದೇಶದಲ್ಲಿ ಯಾವುದೇ ಮಸೂದೆ ಚರ್ಚೆ ಮಾಡಿ ಅದು ಪಾಸಾಗಿ, ರಾಷ್ಟ್ರಪತಿಗಳಿಂದ ಅಂಕಿತವಾದ ಮೇಲೆ ಕಾಯಿದೆಯಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ, ಗೂಂಡಾಗಿರಿಯ ಹೋರಾಟವಾಗಿ ಪರಿವರ್ತಿತವಾಗಬಾರದು.’
-ವಿ.ಶ್ರೀನಿವಾಸಪ್ರಸಾದ್, ಸಂಸದ.







