ಉತ್ತರ ಪ್ರದೇಶಕ್ಕೆ ಸೋತ ಸೌರಾಷ್ಟ್ರ, ಪೂಜಾರ ಫ್ಲಾಪ್

ರಾಜ್‌ಕೋಟ್, ಡಿ.28: ಉತ್ತರಪ್ರದೇಶ ತಂಡ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡವನ್ನು ಇನಿಂಗ್ಸ್ ಹಾಗೂ 72 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಉತ್ತರಪ್ರದೇಶ ತಂಡ ಸೌರಾಷ್ಟ್ರವನ್ನು ಮೊದಲ ಇನಿಂಗ್ಸ್ ನಲ್ಲಿ 331 ರನ್‌ಗೆ ನಿಯಂತ್ರಿಸಿತು. ಆ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮುಹಮ್ಮದ್ ಸೈಫ್ 165 ರನ್ ಸಹಾಯದಿಂದ ತನ್ನ ಮೊದಲ ಇನಿಂಗ್ಸ್‌ನಲ್ಲಿ 523 ರನ್ ಗಳಿಸಿತು. ಸೈಫ್ ಶತಕದ ಸಹಾಯದಿಂದ ಉತ್ತರಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 192 ರನ್ ಮುನ್ನಡೆ ಪಡೆಯಿತು. 4ನೇ ಹಾಗೂ ಅಂತಿಮ ದಿನವಾದ ಶನಿವಾರ ಸೌರಾಷ್ಟ್ರ ತಂಡಕ್ಕೆ ಪಂದ್ಯ ಉಳಿಸಿಕೊಳ್ಳಲು ಶಕ್ತಿಮೀರಿ ಪ್ರದರ್ಶನ ನೀಡಬೇ ಕಾಗಿತ್ತು. ಉತ್ತರಪ್ರದೇಶದ ನಾಯಕ ಹಾಗೂ ಎಡಗೈ ಸ್ಪಿನ್ನರ್ ಆಗಿರುವ ಸೌರಭ್‌ಕುಮಾರ್ 55 ನ್‌ಗೆ 6 ವಿಕೆಟ್ ಪಡೆದು ಸೌರಾಷ್ಟ್ರ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 120 ರನ್‌ಗೆ ಸರ್ವಪತನಗೊಳಿಸಿದರು.ಸೌರಾಷ್ಟ್ರದ ಆರಂಭಿಕ ಆಟಗಾರರಾದ ಹಾರ್ವಿಕ್ ದೇಸಾಯಿ(50)ಹಾಗೂ ಸ್ನೆಲ್ ಪಟೇಲ್(19)ಮೊದಲವಿಕೆಟ್‌ಗೆ 38 ರನ್ ಸೇರಿಸಿದ್ದು, ಲೆಗ್ ಸ್ಪಿನ್ನರ್ ಝೀಶನ್ ಅನ್ಸಾರಿ(3-42)ಪಟೇಲ್ ವಿಕೆಟ್ ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು.
ಹಲವು ಬಾರಿ 3ನೇ ಕ್ರಮಾಂಕದಲ್ಲಿ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ 10 ಎಸೆತಗಳನ್ನು ಎದುರಿಸಿ ಕೇವಲ 3 ರನ್‌ಗೆ ಕುಮಾರ್‌ಗೆ ಔಟಾದರು. 98 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡ ಸೌರಾಷ್ಟ್ರ ಆ ಬಳಿಕ ಚೇತರಿಸಿಕೊಳ್ಳಲಿಲ್ಲ. ಭರ್ಜರಿ ಗೆಲುವಿನೊಂದಿಗೆ ಉತ್ತರಪ್ರದೇಶ ಏಳಂಕವನ್ನು ಪಡೆದುಕೊಂಡಿದೆ.





