ಪಾಕ್ಗೆ ಹೋಗಿ ಎಂದ ಉ.ಪ್ರ.ಪೊಲೀಸರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಕೇಂದ್ರ ಸಚಿವರ ಸೂಚನೆ

ಲಕ್ನೋ, ಡಿ.29: ಕಳೆದ ಶುಕ್ರವಾರ ಮೀರತ್ನ ಮುಸ್ಲಿಂ ಬಾಂಧವರು ನೆಲೆಸುವ ಸ್ಥಳದಲ್ಲಿ ಕೋಮು ಹೇಳಿಕೆ ನೀಡಿದ್ದ ಪೊಲೀಸರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ ನಗರದಲ್ಲಿ ಮತ್ತೆ ಆರಂಭವಾದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಮೀರತ್ ಪೊಲೀಸ್ ಅಧೀಕ್ಷಕ ಅಖಿಲೇಶ್ ನಾರಾಯಣ್ ಸಿಂಗ್, ಇಬ್ಬರು ಮುಸ್ಲಿಂಮರನ್ನು ಉದ್ದೇಶಿಸಿ, ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ.
‘‘ಈ ವಿಡಿಯೋದಲ್ಲಿ ಪೊಲೀಸರು ನೀಡಿರುವ ಹೇಳಿಕೆ ಒಂದು ವೇಳೆ ಸತ್ಯವೇ ಆಗಿದ್ದರೆ, ಇದು ಖಂಡನೀಯ. ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು’’ ಎಂದು ನಖ್ವಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಪೊಲೀಸರು ಹಾಗೂ ಗುಂಪುಗಳಿಂದ ಯಾವುದೇ ರೀತಿಯ ಹಿಂಸಾಚಾರ ಪ್ರಚೋದನೆಯು ಅಸ್ವೀಕಾರಾರ್ಹ. ಇದು ಪ್ರಜಾಪ್ರಭುತ್ವ ದೇಶದ ಭಾಗವಲ್ಲ. ಮುಗ್ದರು ತೊಂದರೆ ಅನುಭವಿಸದಂತೆ ಪೊಲೀಸರು ಕಾಳಜಿ ವಹಿಸಬೇಕು ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ.