ಕೇಂದ್ರ ಸರ್ಕಾರದ ಆಡಳಿತ ವೈಪಲ್ಯವನ್ನು ಮರೆಮಾಚಲು ಪೌರತ್ವ ತಿದ್ದುಪಡಿ ಕಾಯ್ದೆ: ಪಿ.ಆರ್. ಭರತ್

ಸಿದ್ದಾಪುರ: ಚುನಾವಣಾ ಸಂಧರ್ಭದಲ್ಲಿ ಜನತೆಗೆ ನೀಡಿದ ಬರವಸೆಗಳೆಲ್ಲ ಸುಳ್ಳಾಗಿದ್ದು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪೌರತ್ವ ಕಾಯಿದೆಯನ್ನು ಜಾರಿಗೆ ತರಲು ಉದ್ದೇಶಿಸಿರುವುದು ಖಂಡನೀಯ ಎಂದು ಸಿ.ಪಿ.ಐ.( ಎಂ) ಪಕ್ಷದ ಶಾಖಾ ಕಾರ್ಯದರ್ಶಿ ಪಿ.ಆರ್ ಭರತ್ ಹೇಳಿದ್ದಾರೆ.
ನೆಲ್ಯುಹುದಿಕೇರಿಯಲ್ಲಿ ಸಿಪಿಐ (ಎಂ) ಪಕ್ಷದ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಇಂದು ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಆರು ವರ್ಷ ಕಳೆದಿದೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಬರವಸೆಗಳೆಲ್ಲವು ಸುಳ್ಳು. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಇಂದಿಗೂ ವಿದ್ಯಾವಂತ ನಿರುದ್ಯೋಗಿ ಯುವಜನರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು100 ದಿನದಲ್ಲಿ ಪ್ರತಿಯೊಬ್ಬರ ಖಾತೆಗೆ ರೂ15ಲಕ್ಷ ಹಾಕುವುದಾಗಿ ಹೇಳಿ ಇಂದಿಗೂ ಯಾರ ಖಾತೆಗೂ ಹಣ ತಲುಪಿಲ್ಲ. ಬರವಸೆ ನೀಡಿ ಮತ ಪಡೆದು ದೇಶದ ಜನತೆಗೆ ಮೋಸ ಮಾಡಿದ್ದಾರೆ ಎಂದರು.
ಇಂದು ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿ ಮೋದಿ ಸರ್ಕಾರಕ್ಕೆ ಶಾಪವಾಕುತ್ತಿರುವಾಗ ಜನರ ದಿಕ್ಕು ತಪ್ಪಿಸಲು ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ದೇಶದ ಜನರ ವಿರೋಧದ ನಡುವೆಯೂ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಬಹುಮತ ಪಡೆದು ಜಾರಿಗೆ ತರಲು ಉದ್ದೇಶಿಸಿದ್ದು, ದೇಶದ ಒಂದು ವರ್ಗವನ್ನು ಗುರಿಯಾಗಿಸಿ ಪೌರತ್ವ ಕಾಯ್ದೆಯನ್ನು ತಂದಿರುವುದಾಗಿದೆ ಎಂದರು.
ಧರ್ಮದ ಹೆಸರಿನಲ್ಲಿ ಹೆಸರಿನಲ್ಲಿ ಧ್ವೇಷ ರಾಜಕೀಯ ಮಾಡುತ್ತಿರುವುದರ ವಿರುದ್ಧ ಸಿಪಿಐಎಂ ಪಕ್ಷ ಸದಾ ಧ್ವನಿ ಎತ್ತಲಿದೆ ಎಂದು ಅವರು ಹೇಳಿದರು.







