ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗಿ ವಿನಯಕುಮಾರ್

ವಿನಯಕುಮಾರ್
ಬೆಂಗಳೂರು, ಡಿ.29: ಕೋಲ್ಕತಾದಲ್ಲಿ ಶನಿವಾರ ಮಿರೆರಾಂ ವಿರುದ್ಧ ರಣಜಿ ಟ್ರೋಫಿ ಪಂದ್ಯದ 2ನೇ ಇನಿಂಗ್ಸ್ನಲ್ಲಿ 24 ರನ್ಗೆ 3 ವಿಕೆಟ್ಗಳನ್ನು ಉರುಳಿಸಿದ ಆರ್.ವಿನಯಕುಮಾರ್ ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ವಿನಯ್ ಇದೀಗ ಒಟ್ಟು 412 ವಿಕೆಟ್ಗಳನ್ನು ಪಡೆದಿದ್ದು, ಇನ್ನೋರ್ವ ವೇಗಿ ಪಂಕಜ್ ಸಿಂಗ್(409 ವಿಕೆಟ್) ದಾಖಲೆಯನ್ನು ಮುರಿದರು. ಹರ್ಯಾಣದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯೆಲ್ ಒಟ್ಟು 637 ವಿಕೆಟ್ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದ ರಣಜಿ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿನಯ್ 7ನೇ ಸ್ಥಾನದಲ್ಲಿದ್ದಾರೆ.
‘ದಾವಣಗೆರೆ ಎಕ್ಸ್ಪ್ರೆಸ್’ ಖ್ಯಾತಿಯ ವಿನಯ ಈಗ ರಣಜಿಯಲ್ಲಿ ಪಾಂಡಿಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಾಂಡಿಚೇರಿ ತಂಡ ಇನಿಂಗ್ಸ್ ಹಾಗೂ 272 ರನ್ ಜಯ ಸಾಧಿಸಿದ ಬಳಿಕ ವಿನಯ್ಗೆ ಸಹ ಆಟಗಾರರು ಗೌರವ ಸಲ್ಲಿಸಿದರು.
34ರ ಹರೆಯದ ವಿನಯ್ 2004ರಲ್ಲಿ ಕರ್ನಾಟಕ ತಂಡದಲ್ಲಿ ತನ್ನ ವೃತ್ತಿಜೀವನ ಆರಂಭಿಸಿದರು. 15 ವರ್ಷಗಳ ಕಾಲ ತನ್ನ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ವಿನಯ್ 133 ಪ್ರಥಮ ದರ್ಜೆ ಪಂದ್ಯಗಳಲ್ಲಿ 474 ವಿಕೆಟ್ಗಳನ್ನು ಪಡೆದಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ ಪಂದ್ಯವನ್ನು ಆಡುವ ಮೂಲಕ ಭಾರತವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು.







