ದೇಶವನ್ನು ಮಾರಿದ ಆಟಗಾರರನ್ನು ಪಾಕ್ ಸ್ವಾಗತಿಸುತ್ತಿದೆ: ಕನೇರಿಯಾ

ಲಾಹೋರ್, ಡಿ.29: ಹಿಂದೂ ಧರ್ಮದವನೆಂಬ ಕಾರಣಕ್ಕೆ ಕೆಲವು ಪಾಕ್ ಆಟಗಾರರು ತನ್ನನ್ನು ಕಡೆಗಣಿಸಿದ್ದು ನಿಜ ಎಂದು ಹೇಳಿದ್ದ ಪಾಕ್‌ನ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ದೇಶವನ್ನೇ ಮಾರಿದ ಕೆಲವು ಆಟಗಾರರನ್ನು ರಾಷ್ಟ್ರೀಯ ಕ್ರಿಕೆಟ್ ತಂಡ ಸ್ವಾಗತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕನೇರಿಯಾ ಹಿಂದೂವಾಗಿದ್ದ ಕಾರಣ ಕೆಲವರಿಗೆ ಆತನೆಂದರೆ ಇಷ್ಟವಾಗುತ್ತಿರಲಿಲ್ಲ. ಆತನನ್ನೇ ಗುರಿ ಮಾಡುತ್ತಿದ್ದರು ಎಂದು ಪಾಕ್‌ನ ಮಾಜಿ ವೇಗಿ ಶುಐಬ್ ಅಖ್ತರ್ ಆರೋಪಿಸಿದ್ದರು. ಇಂದು ಯೂ ಟ್ಯೂಬ್ ವಿಡಿಯೊದಲ್ಲಿ ಮಾತನಾಡಿದ ಕನೇರಿಯಾ,‘‘ನನ್ನ ಯೂ ಟ್ಯೂಬ್ ಚಾನಲ್‌ಗೋಸ್ಕರ, ಪ್ರಚಾರಕ್ಕಾಗಿ ಹೀಗೆ ಮಾತನಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಹಾಗೆ ಮಾಡುತ್ತಿಲ್ಲ. ಅಖ್ತರ್ ರಾಷ್ಟ್ರೀಯ ಟಿವಿಗೆ ನನಗೆ ಆಗಿದ್ದ ತಾರತಮ್ಯದ ಬಗ್ಗೆ ಹೇಳಿದ್ದರು. ಕೆಲವು ಆಟಗಾರರು ಪಂದ್ಯಗಳನ್ನು ಫಿಕ್ಸ್ ಮಾಡಿದ್ದರು ಹಾಗೂ ದೇಶವನ್ನೇ ಮಾರಿದ್ದರು. ಆದರೆ, ಅವರಿಗೆ ಪಾಕ್ ತಂಡದಲ್ಲಿ ಸ್ವಾಗತಿಸಲಾಗುತ್ತಿದೆ’’ಎಂದು ಯಾರ ಹೆಸರನ್ನು ಹೇಳದೆ ಕನೇರಿಯಾ ಆರೋಪಿಸಿದರು.
‘‘ನಾನು ಪಾಕ್ ತಂಡದ ಪರ 10 ವರ್ಷಗಳ ಕಾಲ ಆಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ನನ್ನ ರಕ್ತವನ್ನು ನೀಡಿ 10 ವರ್ಷ ಆಡಿದ್ದೇನೆ. ಕ್ರಿಕೆಟ್ ಪಿಚ್‌ಗೆ ನನ್ನ ರಕ್ತ ನೀಡಿದ್ದೆ. ನನ್ನ ಕೈಬೆರಳು ರಕ್ತದಿಂದ ಸೋರುತ್ತಿದ್ದರೂ ಬೌಲಿಂಗ್ ಮಾಡಿದ್ದೆ. ನಾನು ಹಣಕ್ಕಾಗಿ ದೇಶವನ್ನು ಮಾರಾಟ ಮಾಡಿಲ್ಲ’’ ಎಂದರು.





