ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ 65 ವರ್ಷ ವಯೋಮಿತಿ ನಿಗದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಡಿ.29: ಸಶಸ್ತ್ರ ಪಡೆಗಳ ಮುಖ್ಯಸ್ಥರ ಹುದ್ದೆಗೆ ಗರಿಷ್ಟ 65 ವರ್ಷದ ವಯೋಮಿತಿಯನ್ನು ಸರಕಾರ ನಿಗದಿಗೊಳಿಸಿದ್ದು ರಕ್ಷಣಾ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
1954ರ ಸೇನಾ ನಿಯಮದಂತೆ ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್)ರ ವಯೋಮಿತಿ ಮತ್ತು ಸೇವಾ ಅವಧಿಯನ್ನು ನಿಗದಿಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಶಸ್ತ್ರ ಪಡೆಗಳ ಮುಖ್ಯಸ್ಥರು ದೇಶದ ಮೂರೂ ಸೇನಾ ಪಡೆಗಳ ಪ್ರತಿನಿಧಿಯಾಗಿ ರಕ್ಷಣಾ ಸಚಿವಾಲಯಕ್ಕೆ ಪ್ರಧಾನ ರಕ್ಷಣಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆದರೆ ಇವರು ಮೂರೂ ಸೇನಾಪಡೆಗಳ ಮುಖ್ಯಸ್ಥರಿಗೆ ಆದೇಶ ನೀಡುವಂತಿಲ್ಲ.
ಸಮಾನರಲ್ಲಿ ಪ್ರಥಮ ಎಂದು ಬಣ್ಣಿಸಲಾಗಿರುವ ಸಶಸ್ತ್ರ ಪಡೆಗಳ ಮುಖ್ಯಸ್ಥರು ಸಶಸ್ತ್ರ ಪಡೆಗಳಿಗೆ ಅಗತ್ಯವಾಗಿರುವ ಆಯುಧಗಳ ಖರೀದಿ ಪ್ರಕ್ರಿಯೆಯಲ್ಲಿ ಸಲಹೆ ನೀಡುವ ಜೊತೆಗೆ ಮೂರೂ ಸೇನಾಪಡೆಗಳ ಕಾರ್ಯಾಚರಣೆಯನ್ನು ಸಂಯೋಜಿಸುವ ಜವಾಬ್ದಾರಿ ಹೊಂದಿರುತ್ತಾರೆ. 1999ರ ಕಾರ್ಗಿಲ್ ಯುದ್ಧದ ಬಳಿಕ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಭದ್ರತಾ ಲೋಪದ ಬಗ್ಗೆ ನಿರ್ಧರಿಸಲು ನೇಮಿಸಲಾಗಿದ್ದ ಸಮಿತಿ ಸಿಡಿಎಸ್ ಹುದ್ದೆಯ ಅಗತ್ಯದ ಬಗ್ಗೆ ಮೊದಲು ಶಿಫಾರಸು ಮಾಡಿತ್ತು.





