ಆಸ್ಟ್ರಿಯಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡ ಭಾರತ: ಕಾರಣ ಏನು ಗೊತ್ತೇ ?
ಫೋಟೋ: Twitter @renu_pall
ಹೊಸದಿಲ್ಲಿ: ತಿಂಗಳಿಗೆ 15 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದ ಭಾರತೀಯ ರಾಯಭಾರಿ ರೇಣು ಪಾಲ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಸ್ಟ್ರಿಯಾದಿಂದ ವಾಪಾಸು ಕರೆಸಿಕೊಂಡಿದೆ. ಹಣಕಾಸು ಅವ್ಯವಹಾರ ಮತ್ತು ಸರ್ಕಾರಿ ನಿಧಿಯ ದುರ್ಬಳಕೆ ಆರೋಪದಲ್ಲಿ ಅವರನ್ನು ವಾಪಾಸು ಕರೆಸಿಕೊಳ್ಳಲಾಗಿದೆ.
ಭಾರತೀಯ ವಿದೇಶಿ ಸೇವೆಯ 1988ನೇ ಬ್ಯಾಚ್ ಅಧಿಕಾರಿಯಾಗಿರುವ ರೇಣು ಪಾಲ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಮುಕ್ತಾಯವಾಗಬೇಕಿತ್ತು. "ಸಚಿವಾಲಯದ ಅನುಮತಿ ಇಲ್ಲದೇ ಸರ್ಕಾರಿ ವಸತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ" ಎನ್ನುವುದು ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸಿದ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ವಾಪಾಸು ಕರೆಸಿಕೊಳ್ಳಲಾಗಿದೆ.
ಈ ರಾಜತಾಂತ್ರಿಕ ಅಧಿಕಾರಿ ವಂಚನೆಯಿಂದ ವ್ಯಾಟ್ ಮರುಪಾವತಿಯನ್ನು ಕ್ಲೇಮ್ ಮಾಡಿಕೊಂಡಿದ್ದು, ಸರ್ಕಾರ ನೀಡಿದ್ದ ಹಲವು ಅನುಮತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಮುಖ್ಯ ವಿಚಕ್ಷಣಾ ಅಧಿಕಾರಿ ನೇತೃತ್ವದ ತಂಡ ಕಳೆದ ಸೆಪ್ಟೆಂಬರ್ ನಲ್ಲಿ ವಿಯೆನ್ನಾಗೆ ತೆರಳಿ ತನಿಖೆ ನಡೆಸಿತ್ತು. "ಹಣಕಾಸು ಅವ್ಯವಹಾರ, ಸರ್ಕಾರಿ ಹಣದ ದುರ್ಬಳಕೆ ಮತ್ತು ಸೇವಾ ನಿಯಮವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ" ಎಂದು ಈ ತನಿಖಾ ತಂಡ ಸಿವಿಸಿಗೆ ವರದಿ ಸಲ್ಲಿಸಿತ್ತು. ಡಿಸೆಂಬರ್ 9ರಂದು ಸಚಿವಾಲಯ ಅವರನ್ನು ಕೇಂದ್ರ ಕಚೇರಿಗೆ ವರ್ಗಾಯಿಸಿದ್ದು, ರಾಯಭಾರಿಯ ಯಾವುದೇ ಆಡಳಿತಾತ್ಮಕ ಅಥವಾ ಹಣಕಾಸು ಅಧಿಕಾರವನ್ನು ಚಲಾಯಿಸದಂತೆ ನಿರ್ಬಂಧಿಸಲಾಗಿದೆ. ಭಾನುವಾರ ಸಂಜೆ ಪಾಲ್ ವಿಯೆನ್ನಾದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ.