ವೃದ್ಧಾಶ್ರಮದಲ್ಲಿ ಪ್ರೀತಿಯ ಬಲೆಗೆ ಬಿದ್ದು ವಿವಾಹವಾದ ಕೇರಳ ದಂಪತಿ!

Photo: Facebook (Adv. V S Sunil Kumar)
ತ್ರಿಶೂರ್, ಡಿ.30: ಸರಕಾರಿ ಸ್ವಾಮ್ಯದ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿರುವ 60 ವರ್ಷ ದಾಟಿದ ವೃದ್ದ-ವೃದ್ದೆಯರಿಬ್ಬರು ಪ್ರೀತಿಯ ಬಲೆಗೆ ಬಿದ್ದ ಬಳಿಕ ಇದೀಗ ವಿವಾಹವಾಗಿದ್ದು, ಈ ಇಬ್ಬರಿಗೆ ಟ್ವಿಟರ್ನಲ್ಲಿ ಅಭಿನಂದನೆಯ ಸಂದೇಶಗಳು ಹರಿದುಬರುತ್ತಿವೆ.
60 ವರ್ಷ ದಾಟಿರುವ ಕೊಚಾನಿಯನ್ ಮೆನನ್ ಹಾಗೂ ಲಕ್ಷ್ಮೀ ಅಮ್ಮಾಳ್ ಅವರು ತ್ರಿಶೂರ್ ಜಿಲ್ಲೆಯ ರಾಮವರ್ಮಪುರಂನಲ್ಲಿರುವ ವೃದ್ಧಾಶ್ರಮದಲ್ಲಿ ಪರಸ್ಪರ ಮೊದಲಿಗೆ ಭೇಟಿಯಾದರು. ಬಳಿಕ ಪ್ರೀತಿಯ ಬಲೆಗೆ ಬಿದ್ದರು.
67 ವಯಸ್ಸಿನ ಮೆನನ್ ಹಾಗೂ 65 ವರ್ಷದ ಅಮ್ಮಾಳ್ ಅವರ ಮದುವೆಯ ಫೋಟೊವನ್ನು ಶನಿವಾರ ತೆಗೆಯಲಾಗಿದ್ದು, ಆ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಪ್ರೀತಿಯು ಎಲ್ಲ ಗಡಿಯನ್ನು ಮೀರಲಿ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಮದುವೆಯ ವೇಳೆ ಲಕ್ಷ್ಮೀ ಅವರು ಕೆಂಪು ಸಿಲ್ಕ್ ಸೀರೆ ಧರಿಸಿ, ಮಲ್ಲಿಗೆ ಹೂವನ್ನು ಮುಡಿದಿದ್ದರು. ಮೆನನ್ ಅವರು ಸಾಂಪ್ರದಾಯಿಕ ಬಿಳಿ ಮುಂಡು ಹಾಗೂ ಶರ್ಟ್ ಧರಿಸಿದ್ದರು.
ಕೇರಳದ ವೃದ್ದಾಶ್ರಮದಲ್ಲಿ ಇದೇ ಮೊದಲಿಗೆ ನಡೆದ ವಿವಾಹವಿದು... ಕೊಚಾನಿಯನ್ ಅವರು ಲಕ್ಷ್ಮೀ ಅಮ್ಮಾಳ್ರನ್ನು ವಿವಾಹವಾಗಿದ್ದಾರೆ... ಅಭಿನಂದನೆಗಳು ಎಂದು ಇನ್ನೋರ್ವ ಟ್ವಿಟರ್ ಬಳಕೆದಾರ ಟ್ವೀಟ್ ಮಾಡಿದ್ದಾರೆ.
‘‘ಪ್ರೀತಿಯು ಯಾವುದೇ ಗಡಿಗಳನ್ನು ನೋಡುವುದಿಲ್ಲ. ಇದು ಎಲ್ಲಿಯೂ ನಡೆಯಬಹುದು’’ ಎಂದು ಟ್ವಿಟರ್ ಬಳಕೆದಾರ ಟ್ವೀಟ್ ಮಾಡಿದ್ದಾರೆ.