ಒಂದೇ ಕುಟುಂಬದ 11 ಸದಸ್ಯರ ಸಾವಿಗೆ ಸಾಕ್ಷಿಯಾದ ದಿಲ್ಲಿಯ ‘ಬುರಾರಿ ಹೌಸ್’ ಈಗ ಏನಾಗಿದೆ ಗೊತ್ತೇ?

ಹೊಸದಿಲ್ಲಿ, ಡಿ.30: ಒಂದೇ ಕುಟುಂಬದ 11 ಸದಸ್ಯರುಗಳ ಸಾವಿಗೆ ಸಾಕ್ಷಿಯಾಗಿದ್ದ ದಿಲ್ಲಿಯ ಬುರಾರಿ ಹೌಸ್ ಈಗ ಡಯಾಗ್ನಾಸ್ಟಿಕ್ ಸೆಂಟರ್ ಆಗಿ ಪರಿವರ್ತಿತವಾಗಿದೆ.
2018ರ ಜುಲೈನಲ್ಲಿ ಉತ್ತರ ದಿಲ್ಲಿಯಲ್ಲಿರುವ ಬುರಾರಿ ಹೌಸ್‌ನಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ 11 ಸದಸ್ಯರುಗಳು ಮನೆಯೊಳಗೆ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ನಿರ್ಧರಿಸಿದ್ದರು. ಕುಟುಂಬದ 10 ಸದಸ್ಯರು ಮನೆಯ ಮೊದಲ ಮಾಳಿಗೆಯ ಕಬ್ಬಿಣದ ಗ್ರಿಲ್‌ಗೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರೆ, ವೃದ್ಧ ಮಹಿಳೆಯೊಬ್ಬರು ಕೊಠಡಿಯ ನೆಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದರು. ನೇಣುಹಾಕಿಕೊಂಡವರು ಬಾಯಿಗೆ ಟೇಪ್ ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿದ್ದರೆ, ಇಬ್ಬರು ಅಪ್ರಾಪ್ತ ಮಕ್ಕಳ ಕಾಲನ್ನು ಕಟ್ಟಿಹಾಕಲಾಗಿತ್ತು.
ಭಯಾನಕ ಸಾವಿನ ಪ್ರಕರಣಕ್ಕೆ ಸಾಕ್ಷಿಯಾದ ಬುರಾರಿ ಹೌಸ್‌ನ್ನು ಖರೀದಿಸಿರುವ ಡಾ.ಮೋಹನ್ ಸಿಂಗ್ ಎಂಬುವವರು ಮೊದಲ ಮಾಳಿಗೆಯನ್ನು ಡಯಾಗ್ನಾಸ್ಟಿಕ್ ಕೇಂದ್ರವಾಗಿ ಮಾರ್ಪಡಿಸಿದ್ದಾರೆ.
‘‘ನಾನು ಮೂಢನಂಬಿಕೆಯನ್ನು ನಂಬಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನನ್ನ ರೋಗಿಗಳಿಗೆ ಪರೀಕ್ಷೆಗಾಗಿ ಇಲ್ಲಿಗೆ ಬರಲು ಯಾವುದೇ ತೊಂದರೆಯಿಲ್ಲ. ರಸ್ತೆಯ ಸಮೀಪವಿರುವ ಕಾರಣ ಮನೆ ಅನುಕೂಲಕರವಾಗಿದೆ’’ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಸಿಂಗ್ ತಿಳಿಸಿದ್ದಾರೆ.





