ಜನವರಿ 2ರಂದು ‘ಶಿವಧೂತೆ ಗುಳಿಗೆ’ ತುಳು ನಾಟಕದ ಪ್ರಥಮ ಪ್ರದರ್ಶನ

ಮಂಗಳೂರು, ಡಿ.30: ಕಲಾಸಂಗಮ ಕಲಾವಿದರು ಅರ್ಪಿಸುವ, ತುಳು ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಶಿವಧೂತೆ ಗುಳಿಗೆ’ ಎಂಬ ತುಳು ವಿಭಿನ್ನ ಶೈಲಿಯ ನಾಟಕ ಜನವರಿ 2ರಂದು ಪ್ರಥಮ ಪ್ರದರ್ಶನ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಂದು ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಕಾಣಲಿದೆ ಎಂದರು.
ಈಗಾಗಲೇ 27 ಪ್ರದರ್ಶನಗಳನ್ನು ತುಳುನಾಡಿನ ವಿವಿಧ ಕಡೆ ಪ್ರದರ್ಶಿಸಲು ತಯಾರಾದ ಪೌರಾಣಿಕ ನಾಟಕ ಇದಾಗಿದೆ. ತುಳುನಾಡಿನ ಕಾರ್ಣಿಕದ ಗುಳಿಗ ಸ್ವಾಮಿಯ ಮಹಿಮೆ ಬಗ್ಗೆ ಎರಡೂವರೆ ಗಂಟೆಗಳ ಅವಧಿ ಪರಿಕಲ್ಪನೆಯನ್ನು ಈ ನಾಟಕ ಹೊಂದಿದೆ. ಹರೀಶ್ ಆಚಾರ್ಯ ಮತ್ತು ಚಂದ್ರಶೇಖರ್ ಶಿರ್ವ ಮಟ್ಟಾರ್ ರಂಗವಿನ್ಯಾಸ, ಎ.ಕೆ. ವಿಜಯ್ ಅವರ ಸಂಗೀತ ನಿರ್ದೇಶನದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್ ಕಾಪಿಕಾಡ್, ರವೀಂದ್ರ ಪ್ರಭು, ಡಾ. ವೈಷ್ಣವಿ ನರಸಿಂಹ ಕಿಣಿ, ವಿಶಾ್ ರಾಜ್ ಕೋಕಿಲ ಹಿನ್ನೆಲೆ ಗಾಯನವಿದೆ.
ಪರಮಾನಂದ ವಿ. ಸಾಲ್ಯಾನ್‌ರ ಸಂಭಾಷಣೆಯ ಈ ನಾಟಕಕ್ಕೆ ಗುರುದೇವ್ ಆರ್ಟ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್ ವಿಭಿನ್ನ ರೀತಿಯ ವಸ್ತ್ರಾಲಂಕಾರ ಒದಗಿಸಿದ್ದಾರೆ. ಬಾಬು ಬಲ್ಲಾಜೆ ಅವರ ಪಾದ್ಡನವನ್ನು ನಾಟಕಕ್ಕೆ ಅಳವಡಿಸಲಾಗಿದ್ದು, ತುಳು ಚಿತ್ರನಟ ಹಾಗೂ ಕಿರುತೆರೆ ಖ್ಯಾತಿಯ ಸ್ವರಾಜ್ ಶೆಟ್ಟಿ ಗುಳಿಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದಲ್ಲದೆ ರಮೇಶ್ ಕಲ್ಲಡ್ಕ, ವಿನೋದ್‌ರಾಜ್ ಕೋಕಿಲಾ, ನಿತೇಶ್ ಕಿನ್ನಿಗೋಳಿ, ರಜಿತ್ ಕದ್ರಿ, ಕೀತ್ ಫುರ್ತಾಡೊ, ಧನು ಕುಲಾಲ್ ಬೊಳಂತೂರು, ಜಯರಾಮ ಆಚಾರ್ಯ ಮಂಜೇಶ್ವರ, ಶರಣ್ ಶೆಟ್ಟಿ ವೇಣೂರು, ಸಾಗರ್ ಮಡಂತ್ಯಾರ್, ರಕ್ಷಿತ ರಾವ್, ಕಾಜಲ್ ಬಂಗೇರ ನಾಯಕದಲ್ಲಿ ಅಭಿನಯಿಸಲಿದ್ದಾರೆ. ಹಲವಾರು ವಿಶೇಷತೆಗಳೊಂದಿಗೆ ಈ ನಾಟಕ ಪ್ರದರ್ಶನ ಕಾಣಲಿದ್ದು, ಈ ನಾಟಕವನ್ನು ಯಾಕೆ ಮಾಡಲಾಗುತ್ತಿದೆ ಎಂಬ ಸೂಕ್ಷ್ಮ ಸಂದೇಶವನ್ನು ಕೂಡಾ ಕೊನೆಯಲ್ಲಿ ಕಾಣಬಹುದಾಗಿದೆ. ಹಿರಿಯ ವಿದ್ವಾಂಸ ಡಾ. ವಿವೇಕ್ ರೈ ಹಾಗೂ ಗಣೇಶ್ ಅಮೀನ್ ಸಂಕಮಾರ್ ಮೊದಲಾದವರ ಕೃತಿಗಳನ್ನು ಆಧರಿಸಿ ಈ ನಾಟಕವನ್ನು ತಯಾರಿಲಾಗಿದೆ ಎಂದು ಅವರು ವಿವರಿಸಿದರು.
ಗೋಷ್ಠಿಯಲ್ಲಿ ನಟ ಸ್ವರಾಜ್ ಶೆಟ್ಟಿ, ಸಂಗೀತ ನಿರ್ದೇಕ ಎ.ಕೆ. ವಿಜಯ್ ಉಪಸ್ಥಿತರಿದ್ದರು.







