2ನೇ ಬಾರಿಗೆ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

ಬೆಂಗಳೂರು, ಡಿ.30: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಚುನಾವಣೆಗೆ ಕೋರಂ ಕೊರತೆ ಹಾಗೂ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣೆ ಮುಂದೂಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿಯ ಕೆಂದ್ರ ಕಚೇರಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸೋಮವಾರ(ಡಿ.30)ರಂದು ಆಯೋಜಿಸಲಾಗಿದ್ದ 12 ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕೆ.ಸಿ.ಎಂ ಕಾಯ್ದೆ ಅನ್ವಯ 3:1 ರಷ್ಟು ಸದಸ್ಯರು ಆಗಮಿಸಿರಲಿಲ್ಲ. ಜತೆಗೆ ನಿಗದಿತ ಸಮಯದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಗುತ್ತಿದೆ. ಮುಂದೆ ಚುನಾವಣೆ ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು ಎಂದು ಚುನಾವಣೆ ಸಮಯ ಮುಕ್ತಾಯವಾದ ನಂತರ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. ಈ ವೇಳೆ ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಉಪಸ್ಥಿತರಿದ್ದರು
ಅನರ್ಹರಿಂದ ಚುನಾವಣೆ ಸ್ಥಗಿತ: ರಾಜ್ಯ ಸರಕಾರ ಉಳಿಸುವ ನಿಟ್ಟಿನಲ್ಲಿ ಈಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ 14 ಕಾಂಗ್ರೆಸ್ ಮತ್ತು 4 ಜೆಡಿಸ್ ಪಾಲಿಕೆ ಸದಸ್ಯರು ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಮಾಡಿ ಗೆಲುವಿಗೆ ಸಹಕರಿಸಿದ್ದಾರೆ. ಹೀಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ತಮಗೇ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ಮೂಲ 101 ಬಿಜೆಪಿ ಸದಸ್ಯರು ಹಾಗೂ 8 ಪಕ್ಷೇತರರೂ ಅಧ್ಯಕ್ಷ ಗಾದಿಗೆ ಹೋರಾಟ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಗೆಲುವಿಗೆ ಅನ್ಯ ಪಕ್ಷದವರಿಗೆ ಸ್ಥಾಯಿ ಸಮಿತಿಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿ ಬೆಂಬಲ ಪಡೆದ ಬಿಜೆಪಿ ಇಂದು ಸ್ಥಾನ ಹಂಚಿಕೆಯ ಕಗ್ಗಂಟಿನಲ್ಲಿ ಸಿಲುಕಿದೆ.
ಅನರ್ಹತೆಗೆ ಹೋರಾಟ: ವಿಧಾನಸಭೆ ಶಾಸಕರು ಮತ್ತು ಪಾಲಿಕೆ ಸದಸ್ಯರನ್ನು ಸಾಮಾನ್ಯ ಮತದಾರರೇ ಆಯ್ಕೆ ಮಾಡಿದ್ದಾರೆ. ಅವರನ್ನು ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಆಧಾರವಾಗಿಟ್ಟುಕೊಂಡು ಪಾಲಿಕೆ ಸದಸ್ಯರನ್ನೂ ಅನರ್ಹಗೊಳಿಸಿ ಚುನಾವಣೆಯಿಂದ ದೂರವಿಡಬೇಕು ಎಂದು ವಿರೋಧ ಪಕ್ಷದ ನಾಯಕರು ಆಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದೇ ನೆಪವೊಡ್ಡಿ ಮುಂದೆ ಚುನಾವಣೆ ನಡೆಯುವುದನ್ನೂ ತಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಅನರ್ಹತೆಗೆ ಒತ್ತಾಯಿಸುವ ಸದಸ್ಯರು ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡದ ಕಾರಣ ಚುನಾವಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೇತನದಿಂದ ಖರ್ಚು ಭರಿಸಲು ಆಗ್ರಹ
ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಒಮ್ಮೆ ಆಯೋಜನೆ ಮಾಡಿದರೆ ಅದಕ್ಕೆ ಎಲ್ಲ ಸಿದ್ಧತೆಗಳನ್ನು ಒಳಗೊಂಡು ಸುಮಾರು 6 ರಿಂದ 7 ಲಕ್ಷ ರೂ. ಖರ್ಚಾಗುತ್ತದೆ. ಈ ಹಣ ಸಾರ್ವಜನಿಕರ ತೆರಿಗೆಯಿಂದ ಸಂಗ್ರಹಣೆ ಮಾಡಿದ್ದು ಎಂಬ ಸಾಮಾನ್ಯ ಜ್ಞಾನ ಮರೆತಿರುವ ಸದಸ್ಯರು 2ನೇ ಬಾರಿ ಚುನಾವಣೆ ವೇದಿಕೆ ಸಿದ್ಧಗೊಂಡಿದ್ದರೂ ಹೊರಗುಳಿದಿದ್ದಾರೆ. ತಮ್ಮ ಸ್ವ ಹಿತಾಸಕ್ತಿಗೆ ಸಾರ್ವಜನಿಕರ ಹಣ ಪೋಲು ಮಾಡುತ್ತಿರುವ ಸದಸ್ಯರಿಗೆ ಚುನಾವಣೆ ಖರ್ಚನ್ನು ಅವರ ವೇತನದಿಂದಲೆ ಭರಿಸಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ.







