ಕೃಷಿ ವಿವಿ ಜಿಕೆವಿಕೆ ಆವರಣದಲ್ಲಿ ಜ.3ರಿಂದ 107ನೆ ಭಾರತೀಯ ವಿಜ್ಞಾನ ಸಮ್ಮೇಳನ: ಪ್ರಧಾನಿ ಮೋದಿ ಉದ್ಘಾಟನೆ
15 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ

ಬೆಂಗಳೂರು, ಡಿ. 30: 2020ರ ಜನವರಿ 3ರಿಂದ 7ರ ವರೆಗೆ 107ನೆ ಭಾರತೀಯ ವಿಜ್ಞಾನ ಸಮ್ಮೇಳನವನ್ನು ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’ ವಿಷಯದ ಮೇಲೆ ನಗರದ ಕೃಷಿ ವಿಶ್ವ ವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಸೋಮವಾರ ಜಿಕೆವಿಕೆ ಆವರಣದಲ್ಲಿ ಕುರಿತ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು, ವಿಜ್ಞಾನಿಗಳು, ವಿದ್ವಾಂಸರು ಮತ್ತು ಪ್ರಧಾನ ಉಪನ್ಯಾಸಕರು, ಕಾರ್ಯನೀತಿ ರಚಿಸುವವರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಆಹ್ವಾನಿತರು ಸೇರಿ 15 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮ್ಮೇಳನದಲ್ಲಿ ವಿಜ್ಞಾನದ 14 ವಿವಿಧ ವಿಭಾಗಗಳ ಪ್ರಸ್ತುತ ಸಂಶೋಧನೆ ಮತ್ತು ಆವಿಷ್ಕಾರಗಳ ಬಗ್ಗೆ ಸವಿಸ್ತಾರವಾದ ಉಪನ್ಯಾಸ, ಚರ್ಚಾಗೋಷ್ಠಿ ನಡೆಯಲಿವೆ. ಪ್ರಮುಖವಾಗಿ ಈ ಸಮ್ಮೇಳನದಲ್ಲಿ ಮಹಿಳಾ ವಿಜ್ಞಾನ ಸಮ್ಮೇಳನ, ಮಕ್ಕಳ ವಿಜ್ಞಾನ ಸಮ್ಮೇಳನ ಮತ್ತು ವಿಜ್ಞಾನ ಸಂವಾಹಕರ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಈ ಬಾರಿ ವಿಶೇಷವಾಗಿ ರೈತರ ವಿಜ್ಞಾನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಆಯಾ ವಿಷಯಗಳಲ್ಲಿ ನೈಪುಣ್ಯತೆ ಹೊಂದಿ ಪ್ರಖ್ಯಾತರಾಗಿರುವವರನ್ನು ಆಹ್ವಾನಿಸಿ ಉಪನ್ಯಾಸಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ.
ವಿಜ್ಞಾನ ವಸ್ತು ಪ್ರದರ್ಶನವು Pride of India ಎಂಬ ಶೀರ್ಷಿಕೆಯಡಿಯಲ್ಲಿ ವಿವಿಧ ತಂತ್ರಜ್ಞಾನ, ಯಂತ್ರೋಪಕರಣಗಳು, ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ವಿಜ್ಞಾನ ವಸ್ತುಪ್ರದರ್ಶನದ ಪ್ರವೇಶ ಉಚಿತವಾಗಿದ್ದು, ಜನವರಿ 4 ರಿಂದ 7ರ ವರೆಗೆ ಸಾರ್ವಜನಿಕರು ಭೇಟಿ ನೀಡಬಹುದು ಎಂದರು.
ರಾಷ್ಟ್ರೀಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಕೆ.ಎಸ್.ರಂಗಪ್ಪ ಮಾತನಾಡಿ, ಪ್ರಸ್ತುತ 107ನೆ ಭಾರತೀಯ ವಿಜ್ಞಾನ ಸಮ್ಮೇಳನದ ಹಲವು ಮಾಹಿತಿಗಳನ್ನು ನಿಖರವಾಗಿ ಒದಗಿಸಲು ISC 2020 UASB ಎಂಬ ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿಪಡಿಸಿದ್ದು ಈ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಲವಾರು ಪ್ರಯೋಜನಗಳನ್ನು ಹೊಂದಿರುವ ಈ ಆ್ಯಪ್‌ನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿವರಗಳಿಗಾಗಿ ಶುಲ್ಕರಹಿತ ಕರೆ ಸಂಖ್ಯೆ 1800 572 2020ನ್ನು ಸಂಪರ್ಕಿಸಬಹುದು ಅಥವಾ www.isc2020uasb.com ವೆಬ್ಸೈಟ್‌ಗೆ ಭೇಟಿ ನೀಡಬಹುದು.
107ನೆ ಕಾಂಗ್ರೆಸ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ ಎಂಬ ವಿಷಯದೊಂದಿಗೆ ನಡೆಸಲಾಗುತ್ತಿದೆ. ಕೃಷಿ ಗ್ರಾಮೀಣಾಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವುದರಿಂದ, ರೈತ ಕೇಂದ್ರಿತ ವಿಜ್ಞಾನ ಸಮಾವೇಶ ಆಯೋಜಿಸಲಾಗಿದೆ ಎಂದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಭಾರತೀಯ ಕೃಷಿ ಅನುಸಂದಾನ ಪರಿಷತ್ತು(ಐಸಿಎಆರ್), ಹೊಸದಿಲ್ಲಿ ಇವರ ಸಹಯೋಗದೊಂದಿಗೆ ರೈತರನ್ನು ಆಯ್ಕೆ ಮಾಡಲಾಗಿದೆ. ಆಡಳಿತಾತ್ಮಕ ಉದ್ದೇಶಕ್ಕಾಗಿ ಐಸಿಎಆರ್ ದೇಶವನ್ನು 11 ವಲಯಗಳಾಗಿ ವಿಂಗಡಿಸಿದೆ. 10 ವಲಯಗಳಿಂದ, ಪ್ರತಿ 10 ವಲಯದಿಂದ 10 ನವೀನ ರೈತರನ್ನು ಆಯ್ಕೆ ಮಾಡಲಾಗಿದ್ದು, ವಲಯ-8(ದಕ್ಷಿಣ ವಲಯ)ದಿಂದ ಇಪ್ಪತ್ತು ರೈತರನ್ನು ಕಾಂಗ್ರೆಸ್‌ಗೆ ಆಯ್ಕೆ ಮಾಡಲಾಗಿರುತ್ತದೆ. ಒಟ್ಟು 120 ನವೀನ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿ ವಲಯದಿಂದ ರೈತರೊಂದಿಗೆ ಕೃಷಿ ವಿಜ್ಞಾನ ಕೇಂದ್ರದ ಪ್ರತಿನಿಧಿಯೂ ಇರುತ್ತಾರೆ. ರೈತರ ಪ್ರವಾಸ ಭತ್ಯೆ ಮತ್ತು ನೋಂದಣಿ ವೆಚ್ಚವನ್ನು ಆಯಾ ಕೃಷಿ ವಿಜ್ಞಾನ ಕೇಂದ್ರ/ವಲಯ ಕಚೇರಿಗಳ ಮೂಲಕ ಐಸಿಎಆರ್ ನೀಡಲಿದೆ. ಕೃಷಿ ವಿ.ವಿ. ಬೆಂಗಳೂರು ಊಟ, ವಸತಿ ಮತ್ತು ಸ್ಥಳೀಯ ಸಾರಿಗೆ ಸೌಕರ್ಯವನ್ನು ಒದಗಿಸಲಿದೆ. ಆಸಕ್ತ ಪ್ರಗತಿಪರ ರೈತರು, ವಿಸ್ತರಣಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಬಹುದು.
ಭಾರತೀಯ ವಿಜ್ಞಾನದ ಸಮ್ಮೇಳನದ ಪ್ರತಿಷ್ಠಿತ ವಸ್ತು ಪ್ರದರ್ಶನವು ಅತಿದೊಡ್ಡ ವೈಜ್ಞಾನಿಕ ಪ್ರದರ್ಶನವಾಗಿದ್ದು, ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು, ಪ್ರಮುಖ ವೈಜ್ಞಾನಿಕ ಉತ್ಪನ್ನಗಳು ಮತ್ತು ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿಗಳ ಉಪಕ್ರಮಗಳು, ಯೋಜನೆಗಳು, ಭಾರತದ ಅತ್ಯುತ್ತಮ ಸಾಧನೆಗಳು, ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಸರಕಾರಿ ಇಲಾಖೆಗಳು, ಸಂಶೋಧನಾ ಪ್ರಯೋಗಾಲಯಗಳು, ಶಿಕ್ಷಣ, ಕಾರ್ಪೋರೇಟ್ ಮತ್ತು ರಕ್ಷಣಾ ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಜ.7ರಂದು ನಡೆಯುವ ಭಾರತೀಯ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
.jpg)







