ಎರಡು ಲಕ್ಷ ಶಸ್ತ್ರಾಸ್ತ್ರ ಪರವಾನಿಗೆ ಪ್ರಕರಣ: ಜಮ್ಮು-ಕಾಶ್ಮೀರದಲ್ಲಿ ಮಾಜಿ ಸರಕಾರಿ ಅಧಿಕಾರಿಗಳ ಮೇಲೆ ಸಿಬಿಐ ದಾಳಿ
ಹೊಸದಿಲ್ಲಿ,ಡಿ.30: ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ತನ್ನ ಮೊದಲ ಬೃಹತ್ ಕಾರ್ಯಾಚರಣೆಯನ್ನು ಕೈಗೊಂಡಿರುವ ಸಿಬಿಐ ಶಸ್ತ್ರಾಸ್ತ್ರ ಪರವಾನಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಶ್ರೀನಗರ,ಜಮ್ಮು,ಗುರ್ಗಾಂವ್ ಮತ್ತು ನೋಯ್ಡಾಗಳ 13 ಸ್ಥಳಗಳಲ್ಲಿ ಹಲವಾರು ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ.
ಜಮ್ಮು-ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಶಸ್ತ್ರಾಸ್ತ್ರ ಪರವಾನಿಗೆ ನೀಡಿಕೆಯಲ್ಲಿ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಕುಪ್ವಾರಾ, ಬಾರಾಮುಲ್ಲಾ, ಉಧಮಪುರ, ಕಿಷ್ತವಾರ್, ಶೋಪಿಯಾನ್, ರಾಜೌರಿ, ದೋಡಾ ಮತ್ತು ಪುಲ್ವಾಮಾ ಜಿಲ್ಲೆಗಳ ಮಾಜಿ ಜಿಲ್ಲಾಧಿಕಾರಿಗಳ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
2018,ಜು.12ರಂದು ಜಮ್ಮು-ಕಾಶ್ಮೀರ ಆಡಳಿತವು ಪರವಾನಿಗೆಗಳ ನೀಡಿಕೆಯಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ ಜ.2017 ಮತ್ತು ಫೆ.2018ರ ನಡುವೆ ವಿತರಿಸಲಾಗಿದ್ದ ವ್ಯಕ್ತಿಗತ ಬಂದೂಕು ಲೈಸನ್ಸ್‌ಗಳನ್ನು ಹಿಂದೆಗೆದುಕೊಂಡಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.
ಮಾಜಿ ಸರಕಾರಿ ಅಧಿಕಾರಿಗಳು ಲಂಚಗಳನ್ನು ಪಡೆದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಅನಿವಾಸಿಗಳಿಗೆ ಪರವಾನಿಗೆಗಳನ್ನು ನೀಡಿದ್ದರು ಎಂದು ಸಿಬಿಐ ವಕ್ತಾರ ನಿತಿನ್ ವಾಕಣಕರ ಅವರು ತಿಳಿಸಿದರು.