ಡ್ರಗ್ಸ್ ಮಾರಾಟ ದಂಧೆ: ನಾಲ್ವರು ಅಂಚೆ ಇಲಾಖೆ ನೌಕರರ ಬಂಧನ

ಬೆಂಗಳೂರು, ಡಿ.30: ವಿದೇಶಗಳಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು, ನಗರದೆಲ್ಲೆಡೆ ಸರಬರಾಜು ಮಾಡುತ್ತಿದ್ದ ಭಾರತೀಯ ಅಂಚೆ ಇಲಾಖೆ ನೌಕರರ ತಂಡವೊಂದನ್ನು ಸೆರೆ ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸ್ಟಿಟೆಂಟ್ ಆಗಿದ್ದ ದೇವರ ಚಿಕ್ಕನಹಳ್ಳಿಯ ರಮೇಶ್ ಕುಮಾರ್(47) ಹಾಗೂ ಎಂಟಿಎಸ್ ಸಿಬ್ಬಂದಿಗಳಾಗಿದ್ದ ಶ್ರೀರಾಮಪುರದ ಎಚ್.ಸುಬ್ಬ(34), ಆರ್‌ಟಿನಗರದ ಸೈಯದ್ ಅಹ್ಮದ್(54), ನಾಗವಾರದ ವಿಜಯ ರಾಜನ್(58) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಇಲ್ಲಿನ ರಾಜಭವನ ರಸ್ತೆಯಲ್ಲಿನ ಜಿಪಿಒ ಕಚೇರಿಯಿಂದ ಇತ್ತೀಚಿಗಷ್ಟೇ, ಚಾಮರಾಜಪೇಟೆಗೆ ವರ್ಗಾವಣೆಗೊಂಡಿದ್ದ ಫಾರಿನರ್ಸ್ ಪೋಸ್ಟ್ ವಿಭಾಗದ ನೌಕರರಾಗಿದ್ದ ಬಂಧಿತರು, ಡ್ರಗ್ಸ್ ದಂಧೆಕೋರರೊಂದಿಗೆ ಶಾಮೀಲಾಗಿ ನಕಲಿ ವಿಳಾಸಗಳನ್ನು ನಮೂದಿಸಿಕೊಂಡು ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ಚೀಲಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ನೆದರ್ ಲ್ಯಾಂಡ್‌ನಿಂದ ಮಾದಕ ವಸ್ತುಗಳನ್ನು ಬಿಟ್ ಕಾಯಿನ್ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅಂಚೆ ಇಲಾಖೆಯ ಈ ನೌಕರರು ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ನೆದರ್ ಲ್ಯಾಂಡ್, ಡೆನ್ಮಾರ್ಕ್, ಅಮೆರಿಕಾ ಸೇರಿ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಮಾದಕ ವಸ್ತುಗಳ ಪೋಸ್ಟ್‌ಗಳನ್ನು ಹಾಗೂ ಪಾರ್ಸಲ್‌ಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದ ಬಂಧಿತರು, ಅವುಗಳಲ್ಲಿ ಮಾದಕ ವಸ್ತುಗಳು ಇರುವುದನ್ನು ಖಚಿತಪಡಿಸಿಕೊಂಡು ವಿಳಾಸಕ್ಕೆ ತಲುಪಿಸದೇ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ಡ್ರಗ್ಸ್ ಪೆಡ್ಲರ್‌ಗಳಿಗೆ ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸರಬರಾಜು ಮಾಡುತ್ತಿದ್ದರು ಎಂದು ಆಯುಕ್ತರು ಹೇಳಿದ್ದಾರೆ.
ಬಂಧಿತರಿಂದ 20 ಲಕ್ಷ ಮೌಲ್ಯದ 339 ಎಕ್ಸಟೇನ್ಸಿ (ಎಂಡಿಎಂಎ) ಮಾತ್ರೆಗಳು 10 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್, 30 ಗ್ರಾಂ ಬ್ರೌನ್ ಶುಗರ್ ಹಾಗೂ ವಿದೇಶಗಳಿಂದ ಬಂದಿದ್ದ ಪೋಸ್ಟ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಅಧಿಕಾರಿಗಳ ತಂಡಕ್ಕೆ 50 ಸಾವಿರ ಬಹುಮಾನ ನೀಡಲಾಗುವುದು ಎಂದು ಭಾಸ್ಕರ್ ರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್, ರವಿಕುಮಾರ್ ಉಪಸ್ಥಿತರಿದ್ದರು.







